ಪಾಲಿಕೆಯಿಂದ ವಿಜೃಂಭಣೆಯ ರಾಜ್ಯೋತ್ಸವ ಆಚರಣೆಗೆ ತೀರ್ಮಾನ

ಪಾಲಿಕೆಯಿಂದ ವಿಜೃಂಭಣೆಯ ರಾಜ್ಯೋತ್ಸವ ಆಚರಣೆಗೆ ತೀರ್ಮಾನ

ದಾವಣಗೆರೆ, ನ. 8 – ಮಹಾನಗರ ಪಾಲಿಕೆಯಿಂದ ಇದೇ ದಿನಾಂಕ 28, 29 ಹಾಗೂ 30ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಮಹಾಪೌರರಾದ ಕೆ. ಚಮನ್‌ ಸಾಬ್ ಹೇಳಿದರು.

ಕನ್ನಡಪರ, ದಲಿತಪರ ಸಂಘ ಸಂಸ್ಥೆಗಳು ಹಾಗೂ ಪತ್ರಕರ್ತರ ಸಹಯೋಗದಲ್ಲಿ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ  ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ವರ್ಷ ಅತ್ಯಂತ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಭುವನೇಶ್ವರಿ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು. ರಾಜ್ಯದ ಹೆಸರಾಂತ ಸಾಹಿತಿಗಳು ಹಾಗೂ ಕಲಾವಿದರನ್ನು ರಾಜ್ಯೋತ್ಸವಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ಮಾತನಾಡಿ, ಪಾಲಿಕೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲು ಈ ವರ್ಷ 50 ಲಕ್ಷ ರೂ. ಬಜೆಟ್‌ ಮೀಸಲಿರಿಸಲಾಗಿದ್ದು, ಇದಕ್ಕಾಗಿ ಮಹಾಪೌರರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವ ಮೂಲಕ ಟೆಂಡರ್ ಕರೆದು ಕಾರ್ಯಕ್ರಮ ರೂಪಿಸಲಾಗುವುದು. ನಗರದ ಪ್ರಮುಖ ವೃತ್ತಗಳನ್ನು ಸಹ ವಿಶೇಷವಾಗಿ ಅಲಂಕರಿಸಲಾಗುವುದು ಎಂದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಕಳೆದ 40 ವರ್ಷಗಳಿಂದ ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಬರುಬರುತ್ತಾ ತನ್ನ ಮೆರುಗು ಕಳೆದುಕೊಳ್ಳುತ್ತಿದೆ. ಪ್ರಮುಖವಾಗಿ ಮೆರವಣಿಗೆ, ಸನ್ಮಾನ ಹಾಗೂ ಮನರಂಜನೆ ಕಾರ್ಯಕ್ರಮಗಳ ಸುಂದರವಾಗಿ ಹಾಗೂ ಶಿಸ್ತುಬದ್ಧವಾಗಿ ರೂಪಿಸಬೇಕು ಎಂದರು.

ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಸಂತೆಯಾಗಬಾರದು. ಕನ್ನಡದ ಏಳಿಗೆಗೆ ದುಡಿದ ಚಳುವಳಿಗಾರರು, ಸಾಹಿತಿಗಳು ಹಾಗೂ ಕಲಾವಿದರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು.

ಪಾಲಿಕೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದವರಿಗೆ ಶರಣೆ ಸತ್ಯಕ್ಕನ ಹೆಸರಿನಲ್ಲಿ ಪೌರ ಸೇವಾ ಪ್ರಶಸ್ತಿ ನೀಡ ಬೇಕು. ಮನರಂಜನೆ ಎಂದರೆ ಆರ್ಕೆಸ್ಟ್ರಾ ಮಾತ್ರವಲ್ಲ, ಜಾನಪದ ಕಲೆಗಳೂ ಸಹ ಮೇಳೈಸಬೇಕು ಎಂದು ಸಲಹೆ ನೀಡಿದರು. ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಮೂರು ದಿನಗಳ ಕನ್ನಡ ರಾಜ್ಯೋತ್ಸವದಲ್ಲಿ ಮನರಂಜನೆ ಕಾರ್ಯಕ್ರಮದ ಜೊತೆಗೆ ರಾಜ್ಯದ ನೃತ್ಯಕಲೆ ಹಾಗೂ ಶಿಲ್ಪಕಲೆ ಹಾಗೂ ಸಾಹಿತ್ಯದ ವೈಭವ ಸಾರಬೇಕು. ಕವಿಗೋಷ್ಠಿ ಆಯೋಜಿಸಿ ಕವಿಗಳಿಗೆ ಗೌರವ ಸಲ್ಲಿಸಬೇಕು. ಮೆರವಣಿಗೆಯಲ್ಲಿ ಪಾಲಿಕೆ ನೌಕರರು ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

69 ಸಾಧಕರನ್ನು ಗುರುತಿಸಿ ಸನ್ಮಾನ : ಕನ್ನಡ ರಾಜ್ಯೋತ್ಸವವನ್ನು ಪ್ರತಿ ಮನೆಯಲ್ಲಿ ಹಬ್ಬದೋಪಾದಿ ಯಲ್ಲಿ ಆಚರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು. 

ಸ್ಥಳೀಯ ಮತ್ತೂ ುಹೊರಿನ ಕಲಾವಿದರನ್ನು ಆಹ್ವಾನಿಸಿ, ನಾಡು-ನುಡಿ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. 69ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ 69 ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಸಲಹೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ನಗರದಲ್ಲಿ ಇನ್ನೂ ಸಹ ಶೇ. 15ರಷ್ಟು ಆಂಗ್ಲ ನಾಮಫಲಕಗಳು ರಾರಾಜಿಸುತ್ತಿದ್ದು, ಎಲ್ಲವನ್ನೂ ತೆರವುಗೊಳಿಸಬೇಕು. ಎಲ್ಲಾ ವೃತ್ತಗಳನ್ನು ಹಳದಿ ಮತ್ತು ಕೆಂಪು ಬಣ್ಣಗಳಿಂದ ಅಲಂಕರಿಸಿ ಹಬ್ಬದ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.

ಕನ್ನಡಪರ ಸಂಘಟನೆ ಮುಖಂಡ ಸೋಮಶೇಖರ್ ಮಾತನಾಡಿ, ನಗರದ ಮಾಲ್‌ಗಳ ಒಳಗಡೆ ಸಂಪೂರ್ಣ ಆಂಗ್ಲ ಫಲಕ ಅಳವಡಿಸಲಾಗಿದ್ದು, ಕನ್ನಡ ನಾಮಫಲಕ ಅಳವಡಿಸಲು ಆದೇಶಿಸಬೇಕು. ರಾಜ್ಯೋತ್ಸವ ಸನ್ಮಾನ ನೈಜ ಸಾಧಕರಿಗೆ ಸಲ್ಲಬೇಕು ಎಂದರು.

ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಮಾತನಾಡಿ, ಮಕ್ಕಳ ಕವಿಗೋಷಅಠಿ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಿ, ಕನ್ನಡದ ಅಭಿಮಾನ ಮೂಡಿಸಬೇಕು ಎಂದರು. 

ಪಾಲಿಕೆ ಸದಸ್ಯರಾದ ಮೀನಾಕ್ಷಇ ಜಗದೀಶ್, ವೀಣಾ ನಂಜಪ್ಪ, ಸುಧಾ ಇಟ್ಟಿಗುಡಿ ಮಂಜುನಾಥ್, ಪ್ರಸನ್ನಕುಮಾರ್, ಎಸ್.ಟಿ. ವೀರೇಶ್, ವೀರೇಶ್ ಪೈಲ್ವಾನ್, ಮುಖಂಡರಾದ ಸೋಮ್ಲಾಪುರ ಹನುಮಂತಪ್ಪ, ರಾಜಶೇಖರ್ ಗುಂಡಗಟ್ಟಿ, ಕೆ.ಜಿ. ಶಿವಕುಮಾರ್, ಅವಿನಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!