ಕನ್ನಡ ನಾಡು ನುಡಿಯ ಮೇಲೆ ಸದಾಭಿಮಾನ ಬೆಳೆಸಿಕೊಳ್ಳಬೇಕು

ಕನ್ನಡ ನಾಡು ನುಡಿಯ ಮೇಲೆ ಸದಾಭಿಮಾನ ಬೆಳೆಸಿಕೊಳ್ಳಬೇಕು

ತರಳಬಾಳು ನುಡಿಹಬ್ಬ 2024 ಕಾರ್ಯಕ್ರಮದ ಚರ್ಚಾಗೋಷ್ಠಿಯಲ್ಲಿ ಡಾ.ಎಚ್.ವಿ.ವಾಮದೇವಪ್ಪ ಕರೆ

ಸಿರಿಗೆರೆ, ನ. 8 –  ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶುಕ್ರವಾರ ತರಳಬಾಳು ನುಡಿಹಬ್ಬ 2024 ಕಾರ್ಯಕ್ರಮದ ಚರ್ಚಾಗೋಷ್ಠಿ ಜರುಗಿತು.

ಗೋಷ್ಠಿಯಲ್ಲಿ ಕನ್ನಡದ ಅಸ್ಮಿತೆ ಕನ್ನಡಿಗರಿಂದ ಸಾಧ್ಯ ಹಾಗೂ ಕನ್ನಡ ಮಾಧ್ಯಮದ ಕಲಿಕೆ ಉದ್ಯೋಗಕ್ಕೆ ಪೂರಕ ಎಂಬ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಚರ್ಚೆ ವಿಷಯ ಮಂಡಿಸಿದರು. 

ಹಿರಿಯೂರಿನ ವಿಶ್ರಾಂತ ಪ್ರಚಾರ್ಯರಾದ ಎಂ.ಜಿ.ರಂಗಸ್ವಾಮಿ ಮಾತನಾಡಿ ನಮ್ಮ ಮನಸ್ಸಿನಲ್ಲಿ ಕನ್ನಡ ಉಳಿಸಿಕೊಳ್ಳುವ, ಇತರ ಭಾಷೆಗಳನ್ನು ಗೌರವಿಸುವ ರೂಢಿಯನ್ನು ಬೆಳೆಸಿಕೊಂಡಾಗ ಮಾತ್ರ ಕನ್ನಡ ಭಾಷೆಯ ಅಸ್ಮಿಯತೆ ಉಳಿಯುತ್ತದೆ. ಡಾ.ರಾಜಕುಮಾರ್, ಸರ್.ಎಂ.ವಿಶ್ವೇಶ್ವರಯ್ಯ ಅವರು ಕನ್ನಡದಲ್ಲಿಯೇ ಓದಿ ಉನ್ನತ ಸ್ಥಾನ ಪಡೆದಿದ್ದಾರೆ. ಎಲ್ಲರಿಗೂ ಭಾಷೆ ಮೇಲೆ ಹಿಡಿತವಿರಬೇಕು. ಭಾಷೆಯನ್ನು ಗೌರವಿಸಿ, ಉಳಿಸಿ ಬೆಳೆಸಲು ಎಲ್ಲರೂ ಪ್ರಯತ್ನಿಸಿ ಎಂದರು.

ಶ್ರೀ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಮಾತನಾಡಿ ತರಳಬಾಳು ನುಡಿ ಹಬ್ಬ ನಿರಂತರವಾಗಿ ನಡೆಯಲಿ. ಈ ಕಾರ್ಯಕ್ರಮವು ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಿದೆ. ಕನ್ನಡದ ವಿದ್ವಾಂಸರು ಕನ್ನಡವನ್ನು ಉಸಿರಾಗಿಸಿ ಕೊಂಡು ಕನ್ನಡ ಭಾಷೆಯ ಪ್ರಭಾವವನ್ನು ಹೆಚ್ಚಿಸಿದರು. ನಮ್ಮಲ್ಲಿ ಅಭಿಮಾನವಿರಬೇಕೆ ಹೊರತು ದುರಾಭಿಮಾನ ಇರಬಾರದು. ಕನ್ನಡ ನಾಡು ನುಡಿಯ ಬಗ್ಗೆ ಸದಾಭಿಮಾನ ಬೆಳೆಸಿ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಡಾ.ವಿ.ಜಯರಾಮಯ್ಯ ಮಾತನಾಡಿ ಕನ್ನಡಕ್ಕೆ 2300 ವರ್ಷಗಳ ಇತಿಹಾಸವಿದೆ. ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗವು ಸಹ ಕನ್ನಡ ಅಸ್ಮಿತಿಯಿಂದಲೇ ಹೆಸರುವಾಸಿಯಾಗಿದೆ. ಸಾಮಾನ್ಯ ಜನರಿಗೆ ಕನ್ನಡ ಭಾಷೆಯ ಸರಣೀಕರಣವಾದದ್ದು ವಚನ ಸಾಹಿತ್ಯದ ಭಾಷೆಯ ಪ್ರಭಾವದಿಂದ. ಬ್ರಿಟಿಷರ ಆಳ್ವಿಕೆಯ ನಂತರ ಕನ್ನಡವು ಅಸ್ಮಿತೆ ಉಳಿಸಿಕೊಂಡಿದೆ ಎಂದರು.

ಚರ್ಚಾಗೋಷ್ಠಿಯಲ್ಲಿ ಸಿರಿಗೆರೆಯ ಎಂ.ಬಿ.ಆರ್ ಕಾಲೇಜಿನ ಶ್ರೀರಕ್ಷಾ ಪ್ರಥಮ, ಹರಿಹರದ ಕಾಕಂಬಿ ದ್ವಿತೀಯ, ದಾವಣಗೆರೆಯ ವೈಷ್ಣವಿ ತೃತೀಯ ಸ್ಥಾನಗಳನ್ನು ಪಡೆದು ತಲಾ 8000, 5000, 3000 ನಗದು ಬಹುಮಾನಗಳನ್ನು ಪಡೆದರು.

ಸಂಜೆ 6.30ಕ್ಕೆ ಮಸಾರಿ-ನೆಲ್ಕುದುರಿ ಹಗರಿ ಬೊಂಬೆನಳ್ಳಿಯ ರಂಗಲೋಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ರೈತರಧ್ವನಿ ನಾಟಕ, ಸಿರಿಗೆರೆ ಎಂ.ಬಿ.ಆರ್ ಕಾಲೇಜಿನಿಂದ ಬೆಟ್ಟದ ಮೇಲೊಂದು ಮನೆಯ ಮಾಡಿ ನಾಟಕ, ಬಿ.ಎಲ್.ಆರ್ ಕಾಲೇಜಿನಿಂದ ಟ್ಯಾಬ್ಲೆಟ್ ನಾಟಕಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ  ಬೆಂಗಳೂರು ನಗರದ ಕಸಾಪ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಎಚ್.ಎನ್.ವಸಂತ್ ಕುಮಾರ್, ವಿದ್ಯಾಸಂಸ್ಥೆಯ ಕನ್ನಡ ಶಿಕ್ಷಕರು, ಉಪನ್ಯಾಸಕರು, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಇದ್ದರು.

error: Content is protected !!