ನ್ಯಾಮತಿ, ಅ. 28- ನ್ಯಾಮತಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ಕಿಟಕಿ ಮುರಿದು ಒಳನುಗ್ಗಿದ ದುಷ್ಕರ್ಮಿಗಳು, ಹಣ ಹಾಗೂ ಚಿನ್ನಾಭರಣ ದರೋಡೆ ಮಾಡಿದ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆಯೇ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗು ಭಾನುವಾರ ಎರಡು ದಿನಗಳ ಕಾಲ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.
ಕಿಟಕಿಯ ಸರಳುಗಳನ್ನು ಮುರಿದು ನುಗ್ಗಿದ ದರೋಡೆ ಕೋರರು ಬ್ಯಾಂಕ್ ತಡಕಾಡಿದ್ದಾರೆ. ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.
ಸಿಪಿಐ ಎನ್.ಎಸ್.ರವಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣ ದರೋಡೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.