ಜಗಳೂರು : 70ನೇ ವನ್ಯ ಜೀವಿ ಸಪ್ತಾಹ ಸಮಾರೋಪದಲ್ಲಿ ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಅ.7- ದೇಶದ ಪ್ರಾಕೃತಿಕ ಸಂಪತ್ತು ಹಾಗೂ ಪ್ರಾಣಿ ಸಂಕುಲಗಳಿಗೆ ಆಪತ್ತು ಎದುರಾದಾಗ ನಿಸ್ವಾರ್ಥತೆಯಿಂದ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ಎನ್.ಎಂ.ಕೆ. ಶಾಲಾ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ಹಮ್ಮಿಕೊಂಡಿದ್ದ `70ನೇ ವನ್ಯ ಜೀವಿ ಸಪ್ತಾಹ’ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು, ಯುವ ಜನರು ಸಾಮಾಜಿಕ ಹೊಣೆಗಾರಿಕೆ ಮೈಗೂಡಿಸಿಕೊಳ್ಳಬೇಕು. ಅರಣ್ಯ, ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಏಷ್ಯಾದಲ್ಲಿಯೇ ಅಪರೂಪದ ಪ್ರಾಣಿ ಕೊಂಡಕುರಿ ವನ್ಯಧಾಮ ನಮ್ಮ ಕ್ಷೇತ್ರದಲ್ಲಿ ಇರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪಟ್ಟಣ ಸಂಪರ್ಕಿಸುವ ಮುಖ್ಯರಸ್ತೆಗಳ ನಾಲ್ಕು ಪ್ರವೇಶ ದ್ವಾರಗಳಲ್ಲಿ ಕೊಂಡಕುರಿ ಪುತ್ಥಳಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ, ನಾಲ್ಕು ಕೊಂಬುಗಳುಳ್ಳ ಕೊಂಡಕುರಿ ವಿಶ್ವದಲ್ಲಿಯೇ ವಿಶಿಷ್ಟ ಅಪರೂಪದ ಪ್ರಾಣಿಯಾಗಿದೆ. ಕೊಂಡಕುರಿ ರಕ್ಷಣೆ ಮತ್ತು ವನ್ಯಧಾಮವಾಗಲು ಕಾಡಂಚಿನ ಗ್ರಾಮಸ್ಥರ ಸಹಕಾರವಿದೆ. ಕಳೆದ 7 ವರ್ಷಗಳ ಹಿಂದೆ ಚಿರತೆ ದಾಳಿಗೆ ತುತ್ತಾಗಿ ಸಾವಿನಂಚಿನಲ್ಲಿದ್ದ ನಾನು ವನ್ಯಜೀವಿ ರಕ್ಷಣೆ ಮಾಡಿದ ಪುಣ್ಯಕ್ಕಾಗಿ ಪುನರ್ಜನ್ಮ ಪಡೆದಿರುವೆ ಎಂದು ಸ್ಮರಿಸಿದರು.
ಡಾ.ಟಿ.ಜಿ.ರವಿಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿ ,`ಕೊಂಡಕುರಿ ಪತ್ತೆ ಹಚ್ಚುವಾಗ ವಿಂಡ್ ಫ್ಯಾನ್ ಕಂಪನಿಗಳ ಜೊತೆ ಕೈಜೋಡಿಸಲು ಮುಂದಾಗಿದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾದವು. ಡಾ.ಸಂಜಯ್ ಗುಬ್ಬಿ ಅವರ ಸಹಕಾರದಿಂದ ಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದ ಕೊಂಡಕುರಿಗೆ ಸೂಕ್ತ ಭದ್ರತೆ ಸಿಕ್ಕಿದೆ ಮುಂದಿನ ಪೀಳಿಗೆವರೆಗೂ ರಕ್ಷಣೆ ಅಗತ್ಯ’ ಎಂದರು.
ವಕೀಲ ಹಾಗೂ ಪತ್ರಕರ್ತ ಡಿ.ಶ್ರೀನಿವಾಸ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಬರದ ನಾಡು ಜಗಳೂರು ಕೊಂಡಕುರಿ ಪ್ರಾಣಿಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವನ್ಯಜೀವಿ ರಕ್ಷಣಾ ಸಮಿತಿ ರಚಿಸಿ ಜಾಗೃತಿ ಮೂಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಲೋಕೇಶ್, ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ, ಶಶಿಧರ್, ವಕೀಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಬಸವರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಚಂದ್ರ, ಪ.ಪಂ ಅಧ್ಯಕ್ಷ ನವೀನ್ ಕುಮಾರ್, ಮುಖಂಡರಾದ ಕೆ.ಪಿ.ಪಾಲಯ್ಯ, ಬಿ.ಮಹೇಶ್ವರಪ್ಪ, ಆರ್‌ಎಫ್ ಓ ಶ್ರೀನಿವಾಸ್, ಜ್ಯೋತಿ, ಪ.ಪಂ. ನಾಮನಿರ್ದೇಶನ ಸದಸ್ಯರಾದ ಜಯ್ಯಣ್ಣ, ತಾನಾಜಿ ಗೋಸಾಯಿ, ಎನ್ ಎಂಕೆ ಶಾಲಾ ಮುಖ್ಯಸ್ಥರಾದ ಎನ್.ಎಂ.ಲೋಕೇಶ್, ಹಾಲಸ್ವಾಮಿ, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಮುಂತಾದವರು ಇದ್ದರು.