ಸತ್ಯ, ಅಹಿಂಸೆ ಮೂಲಕ ಸೌಹಾರ್ದತೆಯ ಜಗತ್ತು ನಿರ್ಮಿಸೋಣ

ಸತ್ಯ, ಅಹಿಂಸೆ ಮೂಲಕ ಸೌಹಾರ್ದತೆಯ ಜಗತ್ತು ನಿರ್ಮಿಸೋಣ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿಮತ

ದಾವಣಗೆರೆ, ಅ.7- ಸತ್ಯ ಮತ್ತು ಅಹಿಂಸಾ ತತ್ವಗಳನ್ನು ಪಾಲಿಸುವ ಮೂಲಕ ನ್ಯಾಯ ಮತ್ತು ಸೌಹಾರ್ದತೆಯ ಜಗತ್ತು ನಿರ್ಮಿಸಲು ಶ್ರಮಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಸೇವಾ ದಿವಸ್ ಕಾರ್ಯಕ್ರಮದಲ್ಲಿ ಶ್ರಮದಾನ ನಡೆಸಿ, ಮಾನವ ಸರಪಳಿ ಮತ್ತು ಚಿಂತನ ಮಂಥನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಳತೆ ಮತ್ತು ಸತ್ಯದ ಮಹತ್ವನ್ನು ಕಲಿಸಿದ ಮಹಾತ್ಮಾ ಗಾಂಧಿಜಿಯವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ತತ್ವಗಳಿಗೆ ಬದ್ದರಾಗಿರೋಣ ಎಂದರು.

ವೈಯಕ್ತಿಕ ಯೋಗಕ್ಷೇಮ ಮತ್ತು ರಾಷ್ಟ್ರೀಯ ಪ್ರಗತಿ ಈ ಎರಡಕ್ಕೂ ಸ್ವಚ್ಛತೆ ಅತ್ಯಗತ್ಯವೆಂದು ಗಾಂಧೀಜಿ ಬಲವಾಗಿ ನಂಬಿದ್ದರು ಎಂದು ತಿಳಿಸಿದರು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಹೆಚ್. ಅಣ್ಣಯ್ಯನವರ ಮಾತನಾಡಿ, ಗಾಂಧಿಜೀಯವರು ಹಲವಾರು ಚಳುವಳಿಗಳ ಮೂಲಕ ಶಾಂತಿಯುತ ಹೋರಾಟ ಕಟ್ಟಿ, ಶಾಂತಿ ಮತ್ತು ಅಹಿಂಸಾ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಸಾಧಿಸಿದ್ದು, ಜಗತ್ತಿನ ಇತಿಹಾಸವಾಗಿದೆ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ದೇಶದ ಸ್ವಾತಂತ್ರ್ಯ ಹೋರಾಟವನ್ನು ಸಾಮಾಜಿಕ ಪರಿವರ್ತನೆಯ ಹೋರಾಟವನ್ನಾಗಿ ಪರಿವರ್ತಿಸಿ, ಸಾಮಾಜಿಕ ಪಿಡಗುಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಲಭೂತವಾದ ಮತ್ತು ಕೋಮುವಾದ ನಿವಾರಣೆ ಮಾಡಲು ಸಾಕಷ್ಟು ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ಈ ವೇಳೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಜಿಲ್ಲಾ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್‌ಕುಮಾರ್, ಶ್ರೀರಾಮ ನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಎಂ. ನಿವೇದಿತಾ, ನ್ಯಾಯಾಧೀಶರಾದ ರೇಷ್ಮಾ, ನಾಗೇಶ್, ಅಮರ್, ಗಾಯತ್ರಿ, ಮಲ್ಲಿಕಾರ್ಜುನ್, ಪ್ರಶಾಂತ್, ಸಿದ್ದರಾಜ್, ನಾಝೀಯಾ ಕೌಸರ್, ವಕೀಲರ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ನೀಲಕಂಠಯ್ಯ, ಆರ್.ಭಾಗ್ಯಲಕ್ಷ್ಮೀ, ಎಂ. ರಾಘವೇಂದ್ರ ಮತ್ತು ನ್ಯಾಯಾಲಯದ ಸಿಬ್ಬಂದಿ ಇದ್ದರು. ಬಿ. ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. 

error: Content is protected !!