‘ಯುಬಿಡಿಟಿ ಉಳಿಸಿ’ : ಎಸ್ಸೆಸ್‌ಗೆ ಮನವಿ

‘ಯುಬಿಡಿಟಿ ಉಳಿಸಿ’ : ಎಸ್ಸೆಸ್‌ಗೆ ಮನವಿ

ದಾವಣಗೆರೆ, ಸೆ. 30- ಕರ್ನಾಟಕದ ಮೊದಲ ಹೆಮ್ಮೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇಂದು ಅಳಿವಿನ ಅಂಚಿನಲ್ಲಿದೆ. ಈ ಶೈಕ್ಷಣಿಕ ವರ್ಷದಿಂದ ಉನ್ನತ ಕೆಇಎ ಶುಲ್ಕದ ಹೆಸರಲ್ಲಿ 50% ಸೀಟುಗಳಿಗೆ ಹೆಚ್ಚಿನ ಶುಲ್ಕ ಪಡೆಯಲಾಗುತ್ತಿದೆ. 

ಸರ್ಕಾರಿ ಶುಲ್ಕ 42,866 ರೂ ಇದ್ದು, 250 ಸೀಟುಗಳಿಗೆ ಈ ಶುಲ್ಕದಡಿ ಪ್ರವೇಶ ನೀಡಲಾಗುತ್ತಿದೆ.  ಇನ್ನುಳಿದ 254 ಸೀಟುಗಳಿಗೆ 97,495 ರೂ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಸರ್ಕಾರವೇ 50% ಬಡ ವಿದ್ಯಾರ್ಥಿಗಳ ಸೀಟುಗಳನ್ನು ಪೇಮೆಂಟಿಗೆ ಮಾರುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಈ ಇಬ್ಬಗೆಯ ನೀತಿಯು ವಿದ್ಯಾರ್ಥಿ ವಿರೋಧಿಯಾಗಿದೆ. ಇದು ಅತ್ಯಂತ ಖಂಡನೀಯ. 

ಈ ಹಿನ್ನೆಲೆಯಲ್ಲಿ ಎಐಡಿಎಸ್ಓ ಮತ್ತು ಯುಬಿಡಿಟಿ ಉಳಿಸಿ ವಿದ್ಯಾರ್ಥಿಗಳ ಹೋರಾಟ ಸಮಿತಿಯಿಂದ ಮಾನ್ಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 

ನಗರದ ಯುಬಿಡಿಟಿಯಲ್ಲಿ ಈ ರೀತಿಯಾದರೆ ಬಡ ರೈತ-ಕಾರ್ಮಿಕರ ಮಕ್ಕಳು ಇಂಜಿನಿಯರಿಂಗ್ ಶಿಕ್ಷಣದಿಂದ ದೂರ ಉಳಿಯಬೇಕಾಗುತ್ತದೆ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಯುಬಿಡಿಟಿ ಯನ್ನು ಉಳಿಸಬೇಕೆಂದು ಹಿರಿಯ ಶಾಸಕರನ್ನು ಕೋರಲಾಯಿತು. 

ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರ, ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸುಮನ್ ಟಿ ಎಸ್ ಸೇರಿದಂತೆ ಹೋರಾಟ ಸಮಿತಿ ಸದಸ್ಯರಾದ ಅಭಿಷೇಕ್, ಸಂತೋಷ್, ರಾಜಶೇಖರ್, ಆದರ್ಶ್, ಚಂದನಾ, ರೀಮಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!