ಸಾಣೇಹಳ್ಳಿಯ `ಸಾಧಕ ರೈತರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶ್ರೀ
ಸಾಣೇಹಳ್ಳಿ, ಸೆ. 27 – ನಿಜವಾದ ರೈತ ಆನಂದದಿಂದ, ಸ್ವಾಭಿಮಾನದಿಂದ ಬದುಕುತ್ತಾನೆ. ನಿಜವಾದ ಕೃಷಿ ವಿಜ್ಞಾನಿ ರೈತನೇ ಆಗಿದ್ದಾನೆ. ಓದಿ ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸ ಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಸರ್ವೋದಯ ಕೃಷಿ ಘಟಕ ಹಾಗೂ ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ `ಸಾಧಕ ರೈತರ ಸಮ್ಮಿಲನ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಂಚಭೂತಗಳು ಮಾನವನ ಜೀವನಕ್ಕೆ ಬೇಕಾದ ಎಲ್ಲ ಆಹಾರವನ್ನು ಕೊಡುತ್ತವೆ. ಆದರೆ ಮಾನವ ದುರಾಸೆಯಿಂದ ಪಂಚಭೂತಗಳನ್ನು ನಾಶ ಮಾಡಿ ದ್ದಾನೆ. ದಾಹ ಹೆಚ್ಚಾದಂತೆ ಮನುಷ್ಯ ತನ್ನ ಸುಖವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ದುರಾಸೆಯನ್ನು ದೂರ ತಳ್ಳಿದರೆ ನೆಮ್ಮದಿ ಜೀವನ ಮಾಡಲಿಕ್ಕೆ ಸಾಧ್ಯ. ಅನೇಕರು ರಾಜಕೀಯವಾಗಿ ಮೇಲೆ ಹೋದಂತೆ ರೈತರ ಮಗ, ಒಕ್ಕಲಿಗ ಮಗನೆಂದು ಹೇಳಿಕೊಳ್ಳುವರು. ಆದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವವರನ್ನು ಕಾಣುತ್ತೇವೆ. ನಮ್ಮ ಸರ್ಕಾರ ರೈತರಿಗೆ ಬೇಕಾದ ವಿದ್ಯುತ್, ನೀರು, ಗೊಬ್ಬರದ ಸೌಲಭ್ಯಗಳನ್ನು ಒದಗಿಸುವುದರ ಕಡೆ ಗಮನಹರಿಸಬೇಕು. ಆಗ ರೈತನ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಬಸವ ಕುಮಾರ ಸ್ವಾಮೀಜಿ ಮಾತನಾಡಿ ನಿಜವಾದ ಪ್ರತಿ ಭಾನ್ವಿತರು ರೈತರು. ಅಂಥವರನ್ನು ಪುರಸ್ಕರಿಸಬೇಕು. ಭೂಮಿಯಲ್ಲಿ ರಾಸಾಯನಿಕ ಹೆಚ್ಚಾಗಿ ಭೂಮಿ ಸತ್ವವನ್ನೇ ಕಳೆದುಕೊಂಡಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಾಡೋಜ ಗೊ. ರು. ಚನ್ನಬಸಪ್ಪ ಮಾತನಾಡಿ, ಗ್ರಾಮೀಣರ ಬದುಕು, ಬೆಡಗು-ಭಿನ್ನಾಣವಲ್ಲ. ಸಹಜ ಬದುಕು ಅವರದು. ಸಣ್ಣ ಹಿಡುವಳಿದಾರರಿಗೆ ನೈಸರ್ಗಿಕ ಕೃಷಿ ತುಂಬಾ ಲಾಭಕಾರಿ. ಕೃಷಿ ಲಾಭಕರವಲ್ಲ ಎನ್ನುವ ಧೋರಣೆ ಸರ್ಕಾರದ್ದಾಗಿದೆ. ಕೃಷಿಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಸರಕಾರ ಮಾಡಿಕೊಂಡಿರುವುದು ಕೃಷಿಕರಿಗೆ ಮಾಡಿದ ಅವಮಾನ ಆಧುನಿಕ ಕೃಷಿ ಬಗ್ಗೆ, ಕೃಷಿ ನೀತಿಯ ಬಗ್ಗೆ ಸರ್ಕಾರ ಪುನರ್ ಚಿಂತನೆ ಮಾಡಬೇಕಾಗಿದೆ ಎಂದರು.
ನಮ್ಮ ರೈತರ ಪ್ರತಿಯೊಂದು ಹೊಲವು ಯಾತ್ರಾ ಸ್ಥಳವಾಗಬೇಕು. ಎಲ್ಲದಕ್ಕೂ ನಮ್ಮ ರೈತರು ಸರ್ಕಾರ ವನ್ನು ಅವಲಂಬಿಸಬಾರದು. ನಾವು ನಂಬಬೇಕಾ ಗಿರುವುದು ನೀತಿಗೆಟ್ಟ ರಾಜಕೀಯವನ್ನಲ್ಲ. ನಮ್ಮ ಮಣ್ಣನ್ನು ಎಂದು ಹೇಳಿದರು.
ಮಾಜಿ ಶಾಸಕ ಮಹಿಮಾ ಜೆ. ಪಾಟೀಲ್ ಮಾತನಾಡಿ, ಮಠಗಳು ರೈತರಲ್ಲಿರುವ ಪ್ರತಿಭೆಗಳನ್ನು ಹೊರ ತರುವ ಕೆಲಸ ಮಾಡುತ್ತಾ ಬಂದಿವೆ. ಹಿಂದೆ ನಮ್ಮ ಹಿರಿಯರು ಏನು ಬೆಳೆಯುತ್ತಿದ್ದರೋ ಅದನ್ನು ಊಟ ಮಾಡ್ತಾ ಇದ್ದರು. ಏನು ಊಟ ಮಾಡುತ್ತಿದ್ದರೋ ಅದನ್ನು ಬೆಳೆಯುತ್ತಿದ್ದರು. ಈಗ ಹಣದ ಭೂತ ಹಿಡಿದು, ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದೇವೆ ಎಂದರು.
ಕೃಷಿ ಸಾಧಕರಾದ ಚಂದ್ರಶೇಖರ್ ನಾರಾಯಣ ಪುರ, ಶಿವಪ್ರಸಾದ್, ಮಂಜುನಾಥ, ವಿಶ್ವೇಶ್ವರ ಸಜ್ಜನ್, ಹೊಯ್ಸಳ ಅಪ್ಪಾಜಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಡಾ. ಗಿರೀಶ್ ಮಾತನಾಡಿದರು.
ಡಾ. ಸೋಮಶೇಖರ್ ಸ್ವಾಗತಿಸಿ, ನಿರೂಪಿಸಿದರು. ಆರಂಭದಲ್ಲಿ ನಾಗರಾಜ್ ಹೆಚ್.ಎಸ್, ತಬಲಾ ಸಾಥಿ ಶರಣ್ ವಚನ ಗೀತೆ ಹಾಗೂ ರೈತರ ಗೀತೆಗಳನ್ನು ಹಾಡಿದರು.