ಹರಪನಹಳ್ಳಿ ಕಾರ್ಯಕ್ರಮದಲ್ಲಿ ಕಮ್ಮತಹಳ್ಳಿ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಶ್ರೀಗಳು
ಹರಪನಹಳ್ಳಿ, ಸೆ. 27- ಲಿಂಗೈಕ್ಯ ಚನ್ನಬಸವ ಶಿವಯೋಗಿಗಳು, ಸಾರಿಗೆ ವ್ಯವಸ್ಥೆ ಇಲ್ಲದ ದಿನಮಾನಗಳಲ್ಲೇ ದೇಶ ಸಂಚರಿಸಿ, ಎಲ್ಲಾ ಸ್ವಾಮೀಜಿಗಳನ್ನು ಒಂದೆಡೆ ಸೇರಿಸಿ, ಧರ್ಮ ಶ್ರೇಣೀಕೃತ ಸಮಾಜದ ವಿರುದ್ಧ ಜಾಗೃತಿ ಮೂಡಿಸಿದ್ದಾರೆ ಎಂದು ಕಮ್ಮತಹಳ್ಳಿ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಶ್ರೀಗಳು ಹೇಳಿದರು.
ತಾಲ್ಲೂಕಿನ ಕಮ್ಮತ್ತಹಳ್ಳಿ ವಿರಕ್ತ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿ ಗಳ 18ನೇ ವರ್ಷದ ಸ್ಮರಣೋತ್ಸವ ಹಾಗೂ ಬಸವ ತತ್ವ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವ ಕಾರ್ಯ ಮಠಗಳಲ್ಲಿನ ಸ್ವಾಮೀಜಿಗಳು ಮಾಡಬೇಕು.
ಬಸವ ತತ್ವವನ್ನು ಜನ ಸಾಮಾನ್ಯರೂ ಬಳಸುವಂತೆ ಮಾಡುವಲ್ಲಿ ಲಿಂಗೈಕ್ಯ ಶ್ರೀಗಳ ಶ್ರಮ ಅಪಾರವಾಗಿದೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಆಶೀರ್ವಚನ ನೀಡಿ, ಲಿಂ. ಚನ್ನಬಸವ ಮಹಾಶಿವಯೋಗಿಗಳು ಬಸವ ತತ್ವ ಹಾಗೂ ಅಧ್ಯಾತ್ಮದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಮತ್ತು ನಡೆದಾಡಿಕೊಂಡೇ ವೈಚಾರಿಕ ಸಮಾಜ ಕಟ್ಟಿದವರಲ್ಲಿ ಪ್ರಮುಖರಾಗಿದ್ದಾರೆ ಎಂದರು.
ಶರಣರ ತತ್ವ ಹಾಗೂ ಕ್ಲಿಷ್ಟಕರ ಸಾಹಿತ್ಯ ಗ್ರಂಥಗಳನ್ನು ಅರ್ಥೈಸಿಕೊಂಡು ಜನ ಸಾಮಾನ್ಯರಿಗೆ ಪ್ರವಚನ ನೀಡಿ, ಸರಳ ಜೀವನದ ಮೂಲಕ ಮಾದರಿಯಾಗಿದ್ದರು ಎಂದು ಸ್ಮರಿಸಿದರು.
ಲಿಂಗ ಜಾತಿಯ ಸಂಕೇತ ಅಲ್ಲ, ಸಮಾನತೆಯ ಸಂಕೇತ ಎಂದ ಅವರು, ರಾಜಕಾರಣಿಗಳು ಧರ್ಮದ ತಳಹದಿಯ ಮೇಲೆ ನಡೆದು ದೇಶವನ್ನು ಅಭಿವೃದ್ಧಿ ಗೊಳಿಸಬೇಕು. ಈ ನಿಟ್ಟಿನಲ್ಲಿ ಶಿವ ಶರಣರ ತತ್ವಾದರ್ಶವನ್ನು ಮೈಗೂಡಿಸಿಕೊ ಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಳಕಲ್ ಗುರು ಮಹಾಂತ ಶ್ರೀಗಳು, ಲಿಂಗನಾಯಕನ ಹಳ್ಳಿ ಚನ್ನವೀರ ಶ್ರೀಗಳು, ಸೋಮಶೇಖರ ಶ್ರೀಗಳು, ಜಯ ಬಸವ ಶ್ರೀಗಳು, ಸಿದ್ಧಲಿಂಗಯ್ಯ ಶ್ರೀಗಳು, ಹನುಮಂತನಾಥ ಶ್ರೀಗಳು, ಹುಂಡಿ ಮಠದ ಗೌರಿ ಶಂಕರ ಶ್ರೀಗಳು, ಗಂದಿಗವಾಡ ಮೃತ್ಯುಂಜಯ ಶ್ರೀಗಳು, ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇದ್ದರು.