ವಾರ್ತಾ ಇಲಾಖೆ ಸಹಯೋಗದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ವಾರ್ತಾ ಇಲಾಖೆ ಸಹಯೋಗದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ದಾವಣಗೆರೆ, ಸೆ. 12- ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನಾಳೆ ದಿನಾಂಕ 13ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪತ್ರಿಕೆಯೊಂದರ ತಯಾರಿಕೆಯ ಹಿಂದಿರುವ ಎಲ್ಲಾ ಎಂಟು ವಿಭಾಗಗಳಿಂದ ಒಬ್ಬೊಬ್ಬರಂತೆ ಹಿರಿಯ ಶ್ರಮಿಕರಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೊತೆಗೆ, ದಾವಣಗೆರೆ ಜಿಲ್ಲೆಯ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ತಲಾ ಒಂದು ಸಾವಿರ ರೂ. ನಗದಿನೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಜೊತೆಗೆ, ಪತ್ರಕರ್ತ ಸಾಧಕರನ್ನು ಅಭಿನಂದಿಸಲಾಗುತ್ತದೆ. ದಾವಣಗೆರೆ ವಿಶ್ವವಿದ್ಯಾನಿಲಯದ ಬಿ.ಎಸ್.ಸಿ. ಪಠ್ಯಕ್ಕೆ ಹಿರಿಯ ಪತ್ರಕರ್ತರೂ ಆಗಿರುವ ಸಾಹಿತಿ ಬಿ.ಎನ್. ಮಲ್ಲೇಶ್ ಅವರ `ಉತ್ತರೆ ಮಳೆ’ ಕವಿತೆ ಆಯ್ಕೆಯಾಗಿದ್ದು, ಅವರೊಂದಿಗೆ, ದಾವಣಗೆರೆ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿರುವ ಹಿರಿಯ ಪತ್ರಿಕಾ ವ್ಯಂಗ್ಯಚಿತ್ರಕಾರ ಹೆಚ್.ಬಿ. ಮಂಜುನಾಥ್, ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷ `ಕನ್ನಡಪ್ರಭ’ದ ಜಿಲ್ಲಾ ಹಿರಿಯ ಪತ್ರಕರ್ತ ನಾಗರಾಜ್ ಎಸ್. ಬಡದಾಳ್, ಚನ್ನಗಿರಿ ತಾಲ್ಲೂಕು ಕೆಯುಡಬ್ಲ್ಯುಜೆ ನೂತನ ಅಧ್ಯಕ್ಷ ವಿ. ಲಿಂಗರಾಜು ಅವರುಗಳನ್ನು ಗೌರವಿಸಲಾಗುತ್ತದೆ.

ಪ್ರಶಸ್ತಿ ಪುರಸ್ಕೃತರು : ಮುದ್ರಣ ಮಾಧ್ಯಮ ವಿಭಾಗದಿಂದ `ಸಂಯುಕ್ತ ಕರ್ನಾಟಕ’ದ ಹಿರಿಯ ಉಪಸಂಪಾದಕ ಮಂಜುನಾಥ್ ಪಿ. ಕಾಡಜ್ಜಿ, ವಿದ್ಯುನ್ಮಾನ ಮಾಧ್ಯಮ ವಿಭಾಗದಿಂದ `ಟಿವಿ9′ ಜಿಲ್ಲಾ ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ, ಛಾಯಾಗ್ರಹಣ ವಿಭಾಗದಲ್ಲಿ `ಸುವರ್ಣ ಟೈಮ್ಸ್ ಆಫ್ ಕರ್ನಾಟಕ’ದ ವಿಜಯಕುಮಾರ್ ಜಾಧವ್, ಡಿಟಿಪಿ / ಡಿಸೈನರ್ ವಿಭಾಗದಲ್ಲಿ
`ವಿಜಯ ಕರ್ನಾಟಕ’ದ ಕೆ.ಜೆ. ದಾನೇಶ್, ಕಛೇರಿ ಸಿಬ್ಬಂದಿ ವಿಭಾಗದಲ್ಲಿ `ಜನತಾವಾಣಿ’ಯ ಕರಡು ತಿದ್ದುಪಡಿಯ ಹೆಚ್. ನಿಂಗಪ್ಪ, ಜಾಹೀರಾತು ವಿಭಾಗದಲ್ಲಿ `ಶ್ವೇತಾ ಅಡ್ವರ್ಟೈಸರ್‌ ಮಾಲೀಕ ಹೆಚ್.ಜಿ. ರುದ್ರೇಶಿ, ಮುದ್ರಣ ವಿಭಾಗದಲ್ಲಿ `ನಗರವಾಣಿ’ಯ ಎಸ್.ಎನ್. ಮಹೇಶ್ ಕಾಶೀಪುರ, ಪತ್ರಿಕೆ ವಿತರಣಾ ವಿಭಾಗದಲ್ಲಿ ಹಿರಿಯ ಪತ್ರಿಕಾ ವಿತರಕ ಟಿ.ಕೆ. ದಿನೇಶ್ ಬಾಬು ಅವರುಗಳಿಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಒಬ್ಬೊಬ್ಬರಂತೆ ಐವರು ಹಿರಿಯ ಪತ್ರಕರ್ತರನ್ನು ಮಾಧ್ಯಮ ಮಾಣಿಕ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾ ಗಿದ್ದು, ಹರಿಹರದಿಂದ `ಪ್ರಜಾವಾಣಿ’ಯ ಹಿರಿಯ ಪತ್ರಕರ್ತರೂ ಆಗಿರುವ ನ್ಯಾಯವಾದಿ ಇನಾಯತ್ ಉಲ್ಲಾ, ಹೊನ್ನಾಳಿಯಿಂದ `ಜನತಾವಾಣಿ’ಯ ಹೆಚ್.ಸಿ. ಮೃತ್ಯುಂಜಯ ಪಾಟೀಲ್, ಜಗಳೂರಿನ `ನನ್ನ ಮಿತ್ರ’ ಸಂಪಾದಕ ಅಣಬೂರು ಮಠದ ಕೊಟ್ರೇಶ್, ಚನ್ನಗಿರಿಯಿಂದ `ವಿಜಯವಾಣಿ’ಯ ಟಿ.ಎನ್. ಜಗದೀಶ್, ನ್ಯಾಮತಿ ತಾಲ್ಲೂಕಿನಿಂದ `ವಿಜಯ ಕರ್ನಾಟಕ’ದ ಎಂ.ಎಸ್. ಶಾಸ್ತ್ರಿ ಹೊಳೆಮಠ ಅವರುಗಳನ್ನು ಗೌರವಿಸಲಾಗುತ್ತದೆ.

ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನು ತಲಾ ಎರಡೂವರೆ ಸಾವಿರ ನಗದಿನೊಂದಿಗೆ, ಶಾಲು, ಹಾರ, ಪೇಟ ತೊಡಿಸಿ ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಗುತ್ತದೆ.

ಸಭಾ ಕಾರ್ಯಕ್ರಮ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವಮೊಗ್ಗ ಶಾಖೆ ಸಂಚಾಲಕರೂ ಆಗಿರುವ ಹಿರಿಯ ಅಧ್ಯಾತ್ಮಿಕ ಚೇತನ ರಾಜಯೋಗಿನಿ ಬ್ರಹ್ಮಾಕುಮಾರಿ ಅನಸೂಯಾಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು `ಮಾಧ್ಯಮ ಮಾಣಿ’ಕ್ಯ ಪ್ರಶಸ್ತಿಯನ್ನು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು `ಸಾಧಕರಿಗೆ ಗೌರವಾರ್ಪಣೆ’, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು `ಪ್ರತಿಭಾ ಪುರಸ್ಕಾರ’ ಪ್ರದಾನ ಮಾಡಲಿದ್ದಾರೆ. ಪತ್ರಿಕೋದ್ಯಮದ ಕುರಿತಂತೆ ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ. ರವಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ. ಕೆಯುಡಬ್ಲ್ಯುಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ, ಕೆಯುಡಬ್ಲ್ಯುಜೆ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ ಮುಖ್ಯ ಅತಿಥಿಗಳಾಗಿದ್ದಾರೆ.

ಸರ್ವಸದಸ್ಯರ ಮಹಾಸಭೆ : ಕಾರ್ಯಕ್ರಮಕ್ಕೂ ಮೊದಲು ಮಧ್ಯಾಹ್ನ 2 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಏರ್ಪಾಡಾಗಿದ್ದು, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ವಾರ್ಷಿಕ ವರದಿ ಮಂಡಿಸಲಿದ್ದಾರೆ. ಖಜಾಂಚಿ ಎನ್.ವಿ. ಬದರಿನಾಥ್ ಲೆಕ್ಕಪತ್ರ ಮಂಡಿಸುವರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಖಜಾಂಚಿ
ಎನ್.ವಿ. ಬದರಿನಾಥ್, ಉಪಾಧ್ಯಕ್ಷ ಆರ್.ಎಸ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ಜೆ.ಎಸ್. ವೀರೇಶ್, ಕಾರ್ಯಕಾರಿ ಸಮಿತಿ ಸದಸ್ಯ ಸಿ.ವೇದಮೂರ್ತಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!