ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ತಾ. ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಒತ್ತಾಯ
ಹರಪನಹಳ್ಳಿ, ಸೆ.11- ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿ ಕಷ್ಟದ ಪರಿಸ್ಥಿತಿಯಲ್ಲಿರುವ ಕಲಾವಿದರಿಗೆ ಪ್ರತಿ ತಿಂಗಳು 10 ಸಾವಿರ ಮಾಸಾಶನವನ್ನು ಸರ್ಕಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ ಒತ್ತಾಯಿಸಿದರು.
ತಾಲ್ಲೂಕಿನ ನಂದಿಬೇವೂರು ಗ್ರಾಮದ ನಂದಿಬಸವೇಶ್ವರ ದೇವಸ್ಥಾನದಲ್ಲಿ ಜರುಗಿದ ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡು-ನುಡಿಯ ಸೇವೆಗೆ ಸಂಬಂಧಿಸಿದಂತೆ ಗಣನೀಯ ಸೇವೆ ಸಲ್ಲಿಸಿದ ಕಲಾವಿದರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ಕೂಡಲೇ ಸರ್ಕಾರ ಕಷ್ಟದಲ್ಲಿರುವ ಕಲಾವಿದರಿಗೆ ಸಹಾಯ ಸಹಕಾರ ನೀಡಬೇಕು ಎಂದರು.
ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ನಾಡು-ನುಡಿಗೆ ಗಣನೀಯ ಸೇವೆ ಸಲ್ಲಿಸಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರಿಗೆ ಪ್ರತಿ ತಿಂಗಳು 2,000 ರೂ.ಗಳ ಮಾಸಾಶನವನ್ನು ನೀಡಲಾಗುತ್ತಿದ್ದು, ಇದರಿಂದ ಜೀವನ ನಡೆಸಲು ಸಾಧ್ಯವಿಲ್ಲ. ಅದ್ದರಿಂದ ಕನಿಷ್ಟ 10,000 ರೂ.ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಲ್ಯಾಣ ಕರ್ನಾಟಕ ಕಲಾವಿದರ ಸಂಘದ ಬಿ.ಪ್ರಭಾಕರ್, ಡಾ.ಹೆಚ್.ಷಡಕ್ಷರಪ್ಪ, ಕೂಲಹಳ್ಳಿ ಚಂದ್ರಪ್ಪ, ಉಜ್ಜಳ್ಳಿ ಮುನಿಯಪ್ಪ, ಬುಡೇನ್ ಸಾಹಬ್, ಎ.ಬಸವರಾಜ, ಪಾರಿ ಮಲ್ಲಿಕಾರ್ಜುನ, ಎ.ಸೋಮನಗೌಡ, ಬಿ.ಮಹೇಶ್ವರಪ್ಪ, ಕೆ.ನರಸಿಂಹಪ್ಪ, ವಿ.ಬಿ.ವೀರೇಶ, ಬಿ.ರೇವಣ್ಣ, ಕುಂ. ಬಸಪ್ಪ, ಸಿ.ಎಂ. ಪಂಚಾಕ್ಷರಯ್ಯ, ಜಯಪ್ಪ, ಹನುಮಂತಪ್ಪ ಜಿ. ಗೋಪಾಲ, ಎ.ರೇವಣ್ಣ ಸೇರಿದಂತೆ ಇತರರು ಇದ್ದರು.