ಬಗರ್‌ ಹುಕ್ಕುಂ ಅರ್ಜಿ ಮಾನ್ಯಗೊಳಿಸಿ, ಹಕ್ಕು ಪತ್ರ ನೀಡುವಂತೆ ಪ್ರಾಂತ ರೈತ ಸಂಘ ಆಗ್ರಹ

ಬಗರ್‌ ಹುಕ್ಕುಂ ಅರ್ಜಿ ಮಾನ್ಯಗೊಳಿಸಿ, ಹಕ್ಕು ಪತ್ರ ನೀಡುವಂತೆ ಪ್ರಾಂತ ರೈತ ಸಂಘ ಆಗ್ರಹ

ದಾವಣಗೆರೆ, ಸೆ.3- ಬಡವರ ಬಗರ ಹುಕ್ಕುಂ ಸಾಗುವಳಿ ಸಕ್ರಮ ಮಾಡಲು ಫಾರಂ ನಂಬರ್ 50, 53, 57ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ಮಾನ್ಯಗೊಳಿಸಿ ಹಕ್ಕು ಪತ್ರ ವಿತರಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಟಿ. ಯಶವಂತ್‌ ಆಗ್ರಹಿಸಿದರು.

ನಗರದಲ್ಲಿ ಈಚೆಗೆ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್) ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಡವರಿಗೆ ಭೂಮಿ ಹಕ್ಕು ನೀಡುತ್ತೇವೆಂದು ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಬಡವರಿಗೆ ಭೂಮಿ ನೀಡದೇ ವಂಚಿಸುತ್ತಿದೆ. ರಾಜ್ಯ ಸರ್ಕಾರದ ಭೂ ನೀತಿಯ ಪ್ರಧಾನ ಫಲಾನುಭವಿಗಳು ಬಂಡವಾಳ ಶಾಹಿಗಳಾಗುತ್ತಿದ್ದಾರೆ ಎಂದು ದೂರಿದರು.

ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬ ಪ್ರದೇಶದಲ್ಲಿ ಪ್ರತಿ ಎಕರೆಗೆ 3 ಕೋಟಿ ರೂ. ಬೆಲೆ ಬಾಳುವ 3667 ಎಕರೆ ಭೂಮಿಯನ್ನು ಕೇವಲ 1 ಲಕ್ಷ ರೂ.ಗೆ ಕ್ರಯದ ಮೂಲಕ ಹಸ್ತಾಂತರಿಸುತ್ತಿದೆ. ರಾಜ್ಯದ ಎಲ್ಲಾ ಕಡೆ ಬಲವಂತದಿಂದ ಭೂ ಸ್ವಾಧೀನ ಪಡಿಸುವ ಮೂಲಕ ರೈತರ ಭೂಮಿಯನ್ನು ಬಂಡವಾಳ ಶಾಹಿಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಸರ್ಕಾರದ ಕಾರ್ಪೊರೇಟ್ ಕಂಪನಿ ಧೋರಣೆಯನ್ನು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುಸರಿಸುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಂಚಾಲಕ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಸಾವಿರಾರು ಜನ ಬಗರ್‌ ಹುಕ್ಕುಂ ಸಾಗುವಳಿದಾರರಿಗೆ ಅನ್ಯಾಯವಾಗುತ್ತಿದೆ. ಕಂದಾಯ ಇಲಾಖೆ ಕೊಟ್ಟ ಸಾಗುವಳಿ ಹಕ್ಕು ಪತ್ರ ಇದ್ದರೂ ಸಹ ನಲ್ಕುಂದ, ಹುಲಿಕಟ್ಟೆ, ನಿಲೋಗಲ್ಲು, ಮ್ಯಾಸ್ರಳ್ಳಿ, ಮಾಯಕೊಂಡ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅರಣ್ಯ ಇಲಾಖೆಯ ಮೂಲಕ ಒಕ್ಕಲೆಬ್ಬಿಸಲು ಕಿರುಕುಳ, ದೌರ್ಜನ್ಯ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮನೆ, ನಿವೇಶನ ಇಲ್ಲದಂತಹ ಸಾವಿರಾರು ಜನರಿಗೆ ನಿವೇಶನ ಕೊಡಲು ಕ್ರಮವಹಿಸುತ್ತಿಲ್ಲ. ಕಳೆದ 15 ತಿಂಗಳಲ್ಲಿ 50ಕ್ಕೂ ಅಧಿಕ ರೈತರ ಆತ್ಮಹತ್ಯೆ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿದ್ದರೂ ಸ್ಥಳೀಯ ಶಾಸಕರು ಮತ್ತು ಸಂಸದರು ಏನೂ ಆಗಿಲ್ಲವೆಂಬಂತೆ ಮೌನವಾಗಿದ್ದಾರೆ ಎಂದು ಕಿಡಿ ಕಾರಿದರು.

ಸಭೆಯಲ್ಲಿ ತಾಲ್ಲೂಕು ಮುಖಂಡರಾದ ಭರ್ಮಪ್ಪ ನಲ್ಕುಂದ, ರಾಜಣ್ಣ ನಿಲೋಗಲ್, ಮಾಂತೇಶ್, ನಾಗರಾಜ್ ಮತ್ತಿತರರಿದ್ದರು. 

error: Content is protected !!