ಹರಿಹರ, ಸೆ.3- ಯಾವುದೇ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಬರಲಿ ರುವ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಂತೆ ಶಾಸಕ ಬಿ.ಪಿ. ಹರೀಶ್ ಕರೆ ನೀಡಿದರು.
ನಗರದ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿ ವರ್ಷವೂ ಗಣೇಶ ಚತುರ್ಥಿ, ಈದ್ ಮಿಲಾದ್ ಹಾಗೂ ಆರೋಗ್ಯ ಮಾತೆ ಹಬ್ಬಗಳು ಜೊತೆಗೇ ಬರುತ್ತವೆ. ಆಚರಣೆಗಳು, ಪದ್ಧತಿಗಳು ಭಿನ್ನವಾಗಿದ್ದರೂ ಇಲ್ಲಿಯವರೆಗೆ ಎಲ್ಲರೂ ಸಹಾನುಭೂತಿಯಿಂದ ಹಬ್ಬ ಆಚರಿಸಿಕೊಂಡು ಬಂದಿದ್ದೀರಿ. ಮುಂದೆಯೂ ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸುವಂತಾಗಲಿ ಎಂದು ಆಶಿಸಿದರು.
ಗಣೇಶನ ವಿಸರ್ಜನೆ ಮೆರವಣಿಗೆ ಸಮಯ ವನ್ನು ರಾತ್ರಿ 9.30 ರವರೆಗೆ ವಿಸ್ತರಿಸುವಂತೆಯೂ, ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಶುಲ್ಕ ಕಡಿಮೆ ಮಾಡುವಂತೆಯೂ ಹಾಗೂ ಒಂದೇ ಕಡೆ ಅನುಮತಿ ಪತ್ರ ಸಿಗುವಂತೆ ಮಾಡಬೇಕಿದೆ ಎಂದು ಅಧಿಕಾರಿಗಳಿಗೆ ಹೇಳಿದ ಶಾಸಕರು, ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯಾಗದಂತೆ ಡಿಜೆ ಸದ್ದು ಕಡಿಮೆ ಇಟ್ಟುಕೊಂಡು ಮೆರವಣಿಗೆ ಮಾಡುವಂತೆ ಸಂಘಟಕರಿಗೆ ಸಲಹೆ ನೀಡಿದರು.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಜಿ.ಎಸ್. ಬಸವರಾಜ್ ಮಾತನಾಡಿ, ನಿಬಂಧನೆಗಳನ್ನು ಪಾಲಿಸಬೇಕು. ಬಂಟಿಂಗ್ಸ್, ಬ್ಯಾನರ್, ಬಾವುಟ ಕಟ್ಟುವಾಗ ಮತ್ತೊಂದು ವರ್ಗದವರಿಗೆ ತೊಂದರೆ ಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಗುರುಬಸವರಾಜ್ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಹಬ್ಬ ಆಚರಿಸಿದಾಗ ಹಿರಿಯರಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಸಿಪಿಐ ದೇವಾನಂದ್ ಮಾತನಾಡಿ, ನಗರ ದಲ್ಲಿ 56 ಕಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕು ಎಂದು ಹೇಳಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಹಬ್ಬದ ವೇಳೆ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಪುರಸಭೆಯಿಂದ ನದಿಯ ಬಳಿ ಒಂದೇ ಸ್ಥಳದಲ್ಲಿ ಗಣೇಶ ವಿಸರ್ಜನೆಗೆ ಸ್ಥಳ ನಿಗದಿ ಪಡಿಸಲಾಗುತ್ತದೆ ಎಂದರು.
ಅಂಜುಮಾನ್ ಇಸ್ಲಾಮಿಯಾ ಸಂಸ್ಥೆಯ ಅಧ್ಯಕ್ಷ ಏಜಾಜ್ ಆಹ್ಮದ್ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಬಹುತೇಕ ಇದೇ ದಿನಾಂಕ 16ರಂದು ಆಚರಿಸಲಾಗುತ್ತದೆ. ಈ ವೇಳೆ ಮೆರವಣಿಗೆಯಲ್ಲಿ ಯಾವುದೇ ಡಿಜೆ ಇರುವುದಿಲ್ಲ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐ ಸುರೇಶ್ ಸರಗಿ, ಎಸ್ ದೇವಾನಂದ್, ಪಿಎಸ್ಐಗಳಾದ ಶ್ರೀಪತಿ ಗಿನ್ನಿ, ಮಂಜುನಾಥ್ ಕುಪ್ಪೇಲೂರು, ಪ್ರಭು ಕೆಳಗಿನ ಮನೆ, ಸಿದ್ದೇಶ್, ವಿಜಯಕುಮಾರ್ ಎಎಸ್ಐಗಳಾದ ರಾಜಶೇಖರ್, ಮನಸೂರ್, ಬೆಸ್ಕಾಂ ಎಇಇ ಮಾರ್ಕಂಡೇಯ, ಅಗ್ನಿಶಾಮಕ ದಳದ ಸಂಜೀವ್ ಕುಮಾರ್, ಆರೋಗ್ಯ ಇಲಾಖೆಯ ಸಂತೋಷ್, ರವಿಕುಮಾರ್, ವಿ.ಎ. ಹೇಮಂತ್ ಕುಮಾರ್, ನಗರಸಭೆ ಸದಸ್ಯ ಎ.ಬಿ. ವಿಜಯಕುಮಾರ್, ಹಿಂದೂ ಜಾಗರಣ ವೇದಿಕೆಯ ದಿನೇಶ್, ಶಿವು, ಮಂಜುನಾಥ್, ಅಂಜುಮಾನ್ ಇಸ್ಲಾಮಿಯಾ ಕಾರ್ಯದರ್ಶಿ ಆಸೀಫ್ ಜುನೇದಿ, ಫೈಯಾಜ್, ಹೆಚ್. ಕೆ. ಕೊಟ್ಟಪ್ಪ, ಹೆಚ್.ಸುಧಾಕರ, ಮಲ್ಲೇಶಪ್ಪ, ಶ್ರೀನಿವಾಸ್ ಕೊಡ್ಲಿ, ಅಶೋಕ, ಯುವರಾಜ್, ಪರಶುರಾಮ್, ಸಿದ್ದೇಶ್, ಹನುಮಂತ್, ಶಾರುಖ್, ಶಾಹಿದ್, ನಜೀರ್, ಪೊಲೀಸ್ ಸಿಬ್ಬಂದಿಗಳಾದ ರವಿಕುಮಾರ್, ನಿಂಗರಾಜ್, ಕರಿಯಪ್ಪ, ಕವಿತಾ, ರಾಧಾಕೃಷ್ಣ, ರಾಜೀವ್ ಇತರರು ಹಾಜರಿದ್ದರು.