ತೊರೆಸಾಲು ಭಾಗದಲ್ಲಿ ಅಂತರ್ಜಲ ಹೆಚ್ಚಳ : ಜಗಳೂರು ಶಾಸಕ ಬಿ.ದೇವೇಂದ್ರಪ್ಪ
ಜಗಳೂರು, ಆ.28- ತಾಲ್ಲೂಕಿನ ಮೂಡಲಮಾಚಿಕೆರೆ ಸಿದ್ದಿಹಳ್ಳಿ ಮಾರ್ಗಮದ್ಯೆ ಜಿನಿಗು ಹಳ್ಳದಲ್ಲಿ ನಿರ್ಮಾಣವಾಗುತ್ತಿರುವ 5ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ತೊರೆಸಾಲು ಭಾಗದಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.
ಚೆಕ್ ಡ್ಯಾಂ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 5ಕೋಟಿ ರೂ. ವೆಚ್ಚದಲ್ಲಿ ಗುಣಮಟ್ಟದ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರಿಂದ ತೊರೆಸಾಲು ಭಾಗದಲ್ಲಿ ಅಂತರ್ಜಲ ಹೆಚ್ಚಳವಾಗಲಿದೆ ಜನ ಜಾನುವಾರುಗಳಿಗೆ ನೀರು ಪೂರೈಕೆಯಾಗಲಿದೆ ಎಂದರು.
ನುರಿತ ಇಂಜಿನಿಯರ್ ಗಳ ಡಿಸೈನ್ ನಂತೆ ವಿನ್ಯಾಸದಲ್ಲಿ ಕಾಮಗಾರಿ ನಿರ್ಮಾಣಗೊಳ್ಳುತ್ತಿದೆ. 9 ಅಡಿ ಎತ್ತರದಲ್ಲಿ ಸೇತುವೆ ನಿರ್ಮಾಣಗೊಂಡಿದೆ. ನೀರು ಸಂಗ್ರಹದ ಪ್ರಮಾಣ ಕಡಿಮೆಯಾಗುತ್ತಿದೆ 2 ಅಡಿ ಎತ್ತರವಿರಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಸಂಬಂಧಿಸಿದ ಇಂಜಿನಿಯರ್ ಮತ್ತು ಗುತ್ತಿಗೆದಾರರ ಬಳಿ ಚರ್ಚಿಸಿ ಹೆಚ್ವುವರಿ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಿಹಳ್ಳಿ ಪ್ರಕಾಶ್ ರೆಡ್ಡಿ, ಹಟ್ಟಿತಿಪ್ಪೇಸ್ವಾಮಿ, ಸಣ್ಣಸೂರಯ್ಯ, ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಮಂಜುನಾಥ್, ಎಂ.ಎಸ್.ಪಾಟೀಲ್, ಕಾಂತರಾಜ್ ಸೇರಿದಂತೆ ಇತರರು ಇದ್ದರು.