ಹರಪನಹಳ್ಳಿ : ಬಳ್ಳಾರಿ ವಿಮ್ಸ್ ಆಸ್ಪತ್ರೆ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಶಿವಶಂಕ್ರಪ್ಪ ಮುದೇಗೌಡರ್
ಹರಪನಹಳ್ಳಿ, ಆ.12- ಬಯಲು ಬಹಿರ್ದೆಸೆ, ವೈಯಕ್ತಿಕ ಸ್ವಚ್ಛತೆಯ ಕೊರತೆ, ಘನ ಮತ್ತು ದ್ರವ ತ್ಯಾಜ್ಯಗಳ ಸೂಕ್ತ ಸಂಸ್ಕರಣೆಯ ಕೊರತೆಗಳಿಂದ ಗ್ರಾಮೀಣ ಪ್ರದೇಶದ ಜನರು ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಬಳ್ಳಾರಿ ವಿಮ್ಸ್ ಆಸ್ಪತ್ರೆ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಶಿವಶಂಕ್ರಪ್ಪ ಮುದೇಗೌಡರ್ ಹೇಳಿದರು.
ತಾಲ್ಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ಹಿರೇಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿ ಮಹಾ ವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿ `ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಂರಕ್ಷಣಾ ಅರಿವು’ ಕುರಿತು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ, ಮಕ್ಕಳ ಮರಣ, ಲಿಂಗಾನುಪಾತ, ಪರಿಸರ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ದುಷ್ಪರಿಣಾಮ ಬೀರಿವೆ. ವಿಶೇಷವಾಗಿ ಆರೋಗ್ಯದ ದೃಷ್ಟಿಯಿಂದ ಘನ ಮತ್ತು ದ್ರವ ತ್ಯಾಜ್ಯದ ದೋಷಪೂರ್ಣ ವಿಲೇವಾರಿಯಿಂದಾಗಿ ಮಲೇರಿಯಾ, ಆಮಶಂಕೆ, ಡೆಂಗ್ಯೂ, ಕಾಲರಾ ಮುಂತಾದ ಕಾಯಿಲೆಗೆ ಕಾರಣವಾಗಿದೆ. ಶೇ.88ರಷ್ಟು ಕಾಯಿಲೆಗಳು ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆಯಿಂದ ಬರುತ್ತವೆ ಎಂದರು.
ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿ ಹೊಸ ಮನೆಗೆ ಶೌಚಾಲಯ ನಿರ್ಮಿಸಿ ಶೇ.100 ರಷ್ಟು ಬಯಲು ಬಹಿರ್ದೆಸೆ ಮುಕ್ತ ಮಾಡುವುದು. ಗ್ರಾಮೀಣ ಪ್ರದೇಶಗಳ ನೈಸರ್ಗಿಕ ಪರಿಸರ ಸಂರಕ್ಷಣೆಗೆ ತೆರೆದ ಸ್ಥಳದಲ್ಲಿ ಯಾವುದೇ ತ್ಯಾಜ್ಯದ ರಾಶಿ ಹಾಕುವುದು, ಸುಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಗ್ರಾಮೀಣ ಭಾಗದ ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆಗೆ ಒಂದು ಸ್ಪಷ್ಟ ಮತ್ತು ಸಮಗ್ರ ಚೌಕಟ್ಟು ನೀಡಲು ಹೊಸ ನೀತಿ ಜಾರಿಗೆ ತರಬೇಕು ಎಂದರು
`ವಚನ ಸಾಹಿತ್ಯದಲ್ಲಿ ತಾತ್ವಿಕತೆ’ ಕುರಿತು ಕನ್ನಡ ಶಿಕ್ಷಕಿ ಮಮತಾಜ್ ಬೇಗಂ ಮಾತನಾಡಿ, ವಚನ ಸಾಹಿತ್ಯ ಎಂಬುದು ಕೊನೆಯಿರದ ತೀರ, ಅದರಲ್ಲಿ ಮಾನವ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೇ ನಿಜ ಶರಣನಾಗುತ್ತಾನೆ. ಭಗವದ್ಗೀತೆಯ ಉದ್ದೇಶಗಳಲ್ಲಿ ಅತ್ಯಂತ ಮುಖ್ಯ ವಾದದ್ದು ವೈಯಕ್ತಿಕ ಬದುಕು ಮತ್ತು ಸಾಮುದಾಯಿಕ ಬದುಕುಗಳ ಮಧ್ಯೆ ಸಾಮರಸ್ಯತೆ ಯನ್ನು ಉಂಟುಮಾಡುವುದು. ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕಿಸಿ ಅಥವಾ ಸಮಾಜವನ್ನು ವ್ಯಕ್ತಿಯಿಂದ ಪ್ರತ್ಯೇಕಿಸಿ ವ್ಯಕ್ತಿಯ ಮತ್ತು ಸಮಾಜದ ಅಗತ್ಯಗಳನ್ನಾಗಲೀ, ಕೆಲಸಕಾರ್ಯಗಳನ್ನಾಗಲೀ ಅರ್ಥಮಾಡಿಕೊಳ್ಳ ಬಯಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ ಎಂದರು.
ಪತ್ರಿಕಾ ಮಾಧ್ಯಮದ ಬಗ್ಗೆ ಯುವಜನತೆಯಲ್ಲಿ ಅರಿವು ಕುರಿತು ಪತ್ರಕರ್ತ ಕೆ.ಉಚ್ಚೆಂಗೆಪ್ಪ ಮಾತನಾಡಿ, ಪತ್ರಿಕೆಗಳು ಮಾಹಿತಿ ಮತ್ತು ಸಾಮಾನ್ಯ ಜ್ಞಾನವನ್ನು ನೀಡುತ್ತವೆ. ಪತ್ರಿಕೆಗಳು ದೇಶದ ಆರ್ಥಿಕ ಪರಿಸ್ಥಿತಿ, ಕ್ರೀಡೆ, ಮನರಂಜನೆ, ವ್ಯಾಪಾರ ಮತ್ತು ವಾಣಿಜ್ಯದ ಬಗ್ಗೆ ಸುದ್ದಿಗಳನ್ನು ನೀಡುತ್ತವೆ. ದಿನಪತ್ರಿಕೆ ಓದುವುದು ಉತ್ತಮ ಅಭ್ಯಾಸವಾಗಿದೆ. ದಿನವೂ ದಿನಪತ್ರಿಕೆ ಓದಿದರೆ ನಮ್ಮ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬಹುದು ಮತ್ತು ಹೆಚ್ಚು ನಿರರ್ಗಳವಾಗಿ ಮಾಡಬಹುದು ಎಂದರು.
ನಿವೃತ್ತ ಶಿಕ್ಷಕ ಹನುಮಂತಪ್ಪ ಮಾತನಾಡಿದರು. ಎಚ್.ಕೆ ಅಜ್ಜನಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎನ್.ಮುತ್ತೇಶ, ಶಿಬಿರಾಧಿಕಾರಿ ಟಿ.ಬಸವರಾಜ, ಉಪನ್ಯಾಸಕರಾದ ಜಿ.ಎಸ್ ಪಟೇಲ್, ಕೆ.ಕೊಟ್ರಗೌಡ, ಆನಂದ ಕರುವಿನ, ಪ್ರವೀಣಕುಮಾರ, ಸಂಗೀತ ಗ್ರಾಮದ ಮುಖಂಡರಾದ ಹಂಪನಗೌಡ, ಬಿ. ಬಸವರಾಜಪ್ಪ, ಚನ್ನನಗೌಡ್ರು, ಅಜ್ಜಯ್ಯ ಸೇರಿ ದಂತೆ ಇತರರು ಇದ್ದರು.