ಗ್ರಾಮೀಣ ವೈದ್ಯರ ಸೇವೆ ಸ್ಫೂರ್ತಿದಾಯಕ

ಗ್ರಾಮೀಣ ವೈದ್ಯರ ಸೇವೆ ಸ್ಫೂರ್ತಿದಾಯಕ

ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಸ್ಫೂರ್ತಿದಾಯಕ ವೈದ್ಯರ ದಿನಾಚರಣೆ

ದಾವಣಗೆರೆ, ಆ.5- ಜೆಜೆಎಂ ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಬಾಡಿ ಆಯೋಜಿಸಿದ್ದ ವೈದ್ಯರ ದಿನಾಚರಣೆಯು ಅರ್ಥಪೂರ್ಣವಾಗಿತ್ತು. 

ಗ್ರಾಮಾಂತರ ಪ್ರದೇಶದಲ್ಲಿ ಎರಡು – ಮೂರು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮೂವರು ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾದ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಸಂಪನ್ನ ಮುತಾಲಿಕ್ ಅವರು ಸನ್ಮಾನಿತರನ್ನು ಪ್ರಶಂಸಿಸುತ್ತಾ, ಇಂತಹ ನಿಸ್ವಾರ್ಥ ಸೇವೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತ ಸೌಕರ್ಯಗಳ ಮಧ್ಯದಲ್ಲಿ ಎಷ್ಟೋ ಜೀವಗಳನ್ನು ಉಳಿಸಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯವನ್ನು ಕಾಪಾಡಲು ಶ್ರಮಿಸುತ್ತಿರುವ ಇವರುಗಳ ಜೀವನ ಎಲ್ಲಾ ವೈದ್ಯರುಗಳಿಗೆ ಸ್ಪೂರ್ತಿದಾಯಕವಾಗಬೇಕು. ಇಂತಹ ಸಮಾಜಮುಖಿ ವೈದ್ಯರನ್ನು ಕರೆತಂದು, ಈ ದಿನ ಸನ್ಮಾನಿಸುತ್ತಿರುವ ಮೆಡಿಕಲ್ ಕಾಲೇಜಿನ ಕಾಳಜಿ ಮೆಚ್ಚುವಂತದ್ದು ಎಂದರು.

30ಕ್ಕೂ ಹೆಚ್ಚು ವರ್ಷಗಳಿಂದ ಕ್ಯಾತನಕೆರೆ ಗ್ರಾಮದಲ್ಲಿ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಡಾ.ಚಂದ್ರಪ್ಪ ಅವರು ಸನ್ಮಾನವನ್ನು ಸ್ವೀಕರಿಸಿದ ನಂತರ ಮಾತನಾಡುತ್ತಾ, ತಮ್ಮ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಏರುಪೇರುಗಳು ಇದ್ದರೂ ವೈದ್ಯನಾಗಬೇಕು ಎಂಬ ಛಲದಿಂದ ಉತ್ತಮ ಅಂಕ ಪಡೆದು, ಸಿಇಟಿಯಲ್ಲಿ ಉತ್ತಮ ರಾಂಕ್‌ನೊಂದಿಗೆ ಈ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದೆ. ಇಂದು ಅದೇ ಕಾಲೇಜಿನಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದರು.

ಹರಪನಹಳ್ಳಿಯಲ್ಲಿ ಚೇತನ ಕ್ಲಿನಿಕ್ ನಡೆಸುತ್ತಿರುವ ಡಾ.ಮಂಜುನಾಥ್ ಕೆ. ಎಂ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ವೈದ್ಯರಿಗೆ ಸಂವಹನ ಕೌಶಲ್ಯ ಅತಿ ಮುಖ್ಯ. ಇದರಿಂದ ರೋಗಿಯ ಮನಸ್ಸನ್ನು ಗೆದ್ದು ಅವರು ಬೇಗ ಗುಣಮುಖರಾಗುವಂತೆ ಮಾಡಬಹುದು. ಔಷಧೀಯ ಜೊತೆಗೆ ನಮ್ಮ ಒಳ್ಳೆಯ ಮಾತುಗಳು ರೋಗಿಯನ್ನು ಬೇಗ ಗುಣಮುಖವಾಗುವಂತೆ ಮಾಡುತ್ತದೆ. ಇದನ್ನು ಪ್ರತಿಯೊಬ್ಬ ವೈದ್ಯರು ಅಳವಡಿಸಿಕೊಳ್ಳಬೇಕು ಎಂದರು.

ಮತ್ತೊಬ್ಬ ಸನ್ಮಾನಿತರಾದ ಜಗಳೂರಿನ ಸಿಟಿ ಕ್ಲಿನಿಕ್‌ನ ವೈದ್ಯರಾದ ಡಾ.ಷಣ್ಮುಖಪ್ಪ ಅವರು ಮಾತನಾಡಿ, ನಾವು ಸಂತ್ರಸ್ತರ ಸೇವೆಯ ಬಗ್ಗೆ ಅವರನ್ನು ಆದಷ್ಟು ಬೇಗ ಗುಣ ಮಾಡುವುದರ ಬಗ್ಗೆ ಹೆಚ್ಚು ಗಮನ ಕೊಡಬೇಕೆ ವಿನಃ, ದುಡ್ಡು ಗಳಿಸುವ ಬಗ್ಗೆ ಅಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಸೌಕರ್ಯಗಳಿಲ್ಲದಿದ್ದರೂ ಸಮಯ ಪ್ರಜ್ಞೆಯಿಂದ ನಾವು ಸಾಕಷ್ಟು ಜೀವಗಳನ್ನು ಅನುಭವದಿಂದ ಉಳಿಸಬಹುದು. ನಮ್ಮ ಕೈ ಮೀರಿದ ಸಮಸ್ಯೆಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡದೇ ಸೂಕ್ತ ಕ್ರಮಕ್ಕೆ ಅನುವು ಮಾಡಿಕೊಟ್ಟು ಸಾಕಷ್ಟು ರೋಗಿಗಳನ್ನು ನಾವು ಬದುಕಿಸಿದ್ದೇವೆ. ಅಂತಹ ಸಮಯ ಪ್ರಜ್ಞೆ ವೈದ್ಯರಿಗೆ ಅಗತ್ಯ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಕ್ಲ ಶೆಟ್ಟಿ ಸ್ವಾಗತಿಸಿದರು. ಡಾ.ಸಂತೋಷ್ ಅವರು ಎಲ್ಲರನ್ನು ವಂದಿಸಿದರು. ವೇದಿಕೆಯ ಮೇಲೆ ಡಾ. ಮೂಗನಗೌಡ ಪಾಟೀಲ್, ಡಾ. ನಾಗಮಣಿ ಅಗರ್‌ವಾಲ್ ಉಪಸ್ಥಿತರಿದ್ದರು. ಡಾ.ಛಾಯಾ ಹಾಗೂ ಡಾ. ನೀತಿ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!