ಎಸ್.ಬಿ.ಸಿ. ಕಾಲೇಜಿನ ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಡಾ.ಸಿ.ಕೆ. ರಮೇಶ್
ದಾವಣಗೆರೆ, ಜು. 11- ವಿದ್ಯಾರ್ಥಿಗಳು ಅಂಕಗಳ ಜೊತೆಗೆ ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಶ್ಯವಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿಶೇಷ ವ್ಯಕ್ತಿಯಾಗಿ ಹೊರ ಹೊಮ್ಮುವುದು ಮುಖ್ಯ ಎಂದು ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಡಾ. ಸಿ.ಕೆ. ರಮೇಶ್ ಹೇಳಿದರು.
ನಗರದ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು (ಎಸ್.ಬಿ.ಸಿ.) ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಘದ ವಾರ್ಷಿಕೋತ್ಸವ, ಕ್ರೀಡಾ, ಸಾಂಸ್ಕೃತಿಕ, ಎನ್ನೆಸ್ಸೆಸ್ ಹಾಗೂ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜಕ್ಕೆ ಏನಾದರೂ ತಮ್ಮಿಂದ ಕೊಡುಗೆ ನೀಡಿದಾಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ. ಇಂದಿನ ವಿದ್ಯಾರ್ಥಿಗಳಲ್ಲಿ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಮೌಲ್ಯ ಇಲ್ಲದ ಶಿಕ್ಷಣ ವ್ಯರ್ಥ. ಪ್ರತಿಯೊಬ್ಬರೂ ಸಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ಮುಖ್ಯ ಎಂದರು.
ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಅಥಣಿ ಪ್ರಶಾಂತ್, ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗ್ಯಶ್ರೀ ಡಿ. ಹುಬ್ಳೀಕರ್ ಮತ್ತಿತರೆ ಗಣ್ಯರು ಪಾಲ್ಗೊಂಡಿದ್ದರು.
ಶಾಂಭವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಚಂದನ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಕೆ.ಷಣ್ಮುಖ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ನಿರೂಪಿಸಿದರು. ಗೌರಿ ಚಿನ್ಮಯಿ ವಂದಿಸಿದರು.