ಕಣಿವೆಬಿಳಚಿ ಗ್ರಾಮದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ
ದಾವಣಗೆರೆ, ಜು. 10- ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯದ ಕೊರತೆಯಿಂದ ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚುತ್ತಿದ್ದು, ರೋಗಗಳನ್ನು ನಿಯಂತ್ರಿಸಲು ಗ್ರಾಮಗಳ ಸ್ವಚ್ಛತೆಗೆ ಪ್ರತಿಯೊಬ್ಬರೂ ಬದ್ಧರಾಗಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಸಲಹೆ ನೀಡಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಣಿವೆಬಿಳಚಿ ಗ್ರಾಮದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕಸ ವಿಲೇವಾರಿ ಘಟಕ, ಹೈಟೆಕ್ ಶೌಚಾಲಯ ಮತ್ತು ಅಂಬೇಡ್ಕರ್ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಕಸ ಮುಕ್ತ ವಾತಾವರಣ ಕಲ್ಪಿಸಲು ಪ್ರತಿ ಗ್ರಾಮಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಿದ್ದು, ಕಸ ಸಂಗ್ರಹಣೆಗಾಗಿ ಮನೆಗಳ ಬಾಗಿಲಿಗೆ ಬರುವ ವಾಹನಕ್ಕೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಹಾಕಬೇಕು. ಮನೆಗಳ ಸಮೀಪ ಹಾಗೂ ಚರಂಡಿಗಳಿಗೆ ಕಸವನ್ನು ಹಾಕದೇ ಸರ್ಕಾರ ರೂಪಿಸಿರುವ ಸ್ವಚ್ಛತಾ ಯೋಜನೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಆರೋಗ್ಯ ರಕ್ಷಣೆಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಪರಮೇಶ್ವರಪ್ಪ, ಸದಸ್ಯ ಎಸ್.ಅಣ್ಣೋಜಿರಾವ್, ಪಂಚಾಯತ್‌ರಾಜ್ ಇಲಾಖೆ ಎಂಜಿನಿಯರ್ ಬಸವರಾಜಪ್ಪ, ಪಿಡಿಒ ಮಂಜುನಾಥ್, ಸ್ತ್ರೀಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.