ಪೆಟ್ರೋಲ್, ಡೀಸೆಲ್‌ ದರ ಇಳಿಸದಿದ್ದರೆ ಹೋರಾಟ ನಿಲ್ಲಲ್ಲ

ಪೆಟ್ರೋಲ್, ಡೀಸೆಲ್‌ ದರ ಇಳಿಸದಿದ್ದರೆ ಹೋರಾಟ ನಿಲ್ಲಲ್ಲ

ಬೆಲೆ ಏರಿಕೆ ವಿರುದ್ಧ ಹರಪನಹಳ್ಳಿ ತಾಲ್ಲೂಕು ಬಿಜೆಪಿ ಪ್ರತಿಭಟನೆ, ತಹಶೀಲ್ದಾರ್‌ಗೆ ಮನವಿ

ಹರಪನಹಳ್ಳಿ, ಜೂ.20- ರಾಜ್ಯದಲ್ಲಿ ಆದ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳವನ್ನು ಖಂಡಿಸಿ ತಾಲ್ಲೂಕು ಬಿಜೆಪಿಯು ಗುರುವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.

ಈ ವೇಳೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‌ ಮಾತನಾಡಿ, ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರ್ಕಾರ ತೈಲ ಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಹೊರೆಯಾಗಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ದೂರಿದರು.

ಈ ಹಿಂದೆ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹೋರಾಟ ಮಾಡುವ ವೇಳೆ `ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್ ದರ 10ರೂ.ಗೆ ಇಳಿಸುತ್ತದೆ’ ಎಂದಿದ್ದ ಅವರೇ ಪೆಟ್ರೋಲ್‌ಗೆ 3 ರೂ. ಮತ್ತು ಡೀಸೆಲ್‌ಗೆ 3.5 ರೂಪಾಯಿ ಹೆಚ್ಚಳ ಮಾಡಿದ್ದಾರೆ ಎಂದು ಕಿಡಿಕಾರಿದರು.

ಶವ ಯಾತ್ರೆ ಮಾಡಿ ಹೋರಾಡಿದ ಕಾಂಗ್ರೆಸ್‌ ಪಕ್ಷವು ಜನ ಸಾಮಾನ್ಯರಿಗೆ ದೊಡ್ಡ ಹೊರೆ ಮಾಡಿದೆ. ಆದ್ದರಿಂದ ತೈಲ ದರ ಇಳಿಕೆ ಮಾಡದಿದ್ದರೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.

ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಆರುಂಡಿ ನಾಗರಾಜ್‌ ಮಾತನಾಡಿ, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಜನ ವಿರೋಧಿ ಆಡಳಿತ ಮಾಡುತ್ತಿದ್ದು, ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಇವರು 6ನೇ ಗ್ಯಾರಂಟಿಯಾಗಿ ಚಿಪ್ಪು, 7ನೇ ಗ್ಯಾರಂಟಿಯಾಗಿ ಚೊಂಬನ್ನು ಜನರ ಕೈಗೆ ನೀಡುತ್ತಿದೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿದರೆ ರಾಜ್ಯ ಸರ್ಕಾರ ಏರಿಕೆ ಮಾಡಿದೆ ಎಂದರು. 

ಅಬಕಾರಿ ಸುಂಕ, ಆಸ್ತಿ ನೋಂದಣಿ ಶುಲ್ಕ, ಪಹಣಿ ಶುಲ್ಕ, ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕವನ್ನು ಹೆಚ್ಚಳ ಮಾಡಿದ್ದನ್ನು ತೀವ್ರವಾಗಿ ವಿರೋಧಿಸಿದರು.

ತಾಲ್ಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನ ಮಲ್ಲಿಕಾರ್ಜುನ್‌ ಮಾತನಾಡಿ, ಜನರ ಪಾಲಿಗೆ ಕಾಂಗ್ರೆಸ್ ಶಾಪವಾಗಿದೆ. ಕೂಡಲೇ ಬೆಲೆ ಏರಿಕೆ ಇಳಿಸಬೇಕು. ಇಲ್ಲದಿದ್ದರೇ ಅಧಿಕಾರದಿಂದ ಇಳಿಯಬೇಕು ಎಂದು ಹೇಳಿದರು.

ಬೆಲೆ ಏರಿಕೆ ಇಳಿಸದಿದ್ದರೆ ಜನಾಂದೋಲ ನದ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಿಂದ ಇಳಿಸಿ ಸ್ಮಶಾನಕ್ಕೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಗುಡುಗಿದರು.

ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ಚೊಂಬಿನ ಜಾಹೀರಾತು ನೀಡಿತ್ತು. ಈಗ ಕಾಂಗ್ರೆಸ್ ಪಕ್ಷವೇ ಜನರ ಕಿವಿಗೆ ಹೂವು, ಕೈಗೆ ಚಿಪ್ಪನ್ನು ನೀಡಿದೆ ಎಂದರು.

ಬಿಜೆಪಿ ಮುಖಂಡರಾದ ಜೆ. ಓಂಕಾರಗೌಡ, ಎಂ. ಶಂಕರ್, ಕಂಚಿಕೇರಿ ಕೆಂಚಪ್ಪ, ಮಂಜಾನಾಯ್ಕ, ಲಿಂಬ್ಯಾನಾಯ್ಕ,  ಬಾಗಳಿ ಕೋಟ್ರೇಶಪ್ಪ, ಚನ್ನನಗೌಡ, ಕುಸುಮ ಜಗದೀಶ್‌ ಮತ್ತು ರೇಖಾ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.

error: Content is protected !!