ವಾಣಿಜ್ಯ ಬೆಳೆಯಿಂದ ತರಕಾರಿ ಬೆಳೆಗಳ ಉತ್ಪಾದನೆ ಕುಸಿತ

ವಾಣಿಜ್ಯ ಬೆಳೆಯಿಂದ ತರಕಾರಿ ಬೆಳೆಗಳ ಉತ್ಪಾದನೆ ಕುಸಿತ

ಪರಿಶಿಷ್ಟ ಪಂಗಡದ ಉಪಯೋಜನೆಯಡಿ `ಈರುಳ್ಳಿ ಬೆಳೆಯ ಸಮಗ್ರ ಬೇಸಾಯ’ ತರಬೇತಿ

ಜಗಳೂರು, ಮೇ 24- ದಾವಣಗೆರೆ ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಾಗಿದ್ದರಿಂದ ಆಹಾರ ಮತ್ತು ತರಕಾರಿ ಬೆಳೆಗಳ ಉತ್ಪಾದನೆ ಕುಸಿತಗೊಂಡಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ ಬಸವನಗೌಡ ಹೇಳಿದರು.

ತಾಲ್ಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ಪರಿಶಿಷ್ಟ ಪಂಗಡದ ಉಪಯೋಜನೆಯಡಿ `ಈರುಳ್ಳಿ ಬೆಳೆಯ ಸಮಗ್ರ ಬೇಸಾಯ’ ತರಬೇತಿಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ಜಿಲ್ಲಾದ್ಯಂತ ತರಕಾರಿ ಬೆಳೆಗಳ ಉತ್ಪಾದನೆ ಕುಸಿತಗೊಂಡಿದ್ದರಿಂದ ತರಕಾರಿಗಳ ಬೆಲೆ ಗಗನಕ್ಕೇರಿದೆ. ಈ ತರಹದ ಬದಲಾವಣೆ ಆಹಾರ ಭದ್ರತಾ ವಿಷಯದಲ್ಲಿ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ಮುಂಗಾರಿನಲ್ಲಿ ಬಿತ್ತಲು `ಅಗ್ರಿ ಫೌಂಡ್ ಡಾರ್ಕ್ ರೆಡ್’ ಈರುಳ್ಳಿ ತಳಿಯನ್ನು ಗ್ರಾಮದ ಆಯ್ದ ರೈತರಿಗೆ ಪರಿಚಯಿಸುತ್ತಿದ್ದು, ಕೆಂಪು ಗಡ್ಡೆಯಾಗಿ ಬೆಳೆಯುವ ಈ ತಳಿಯು 100-110 ದಿನಗಳಲ್ಲಿ ಬರಲಿದೆ ಎಂದರು.

ಬಿತ್ತನೆಗೂ ಮುನ್ನ ಪ್ರತಿ ಕೆ.ಜಿ ಈರುಳ್ಳಿ ಬೀಜಕ್ಕೆ 4 ಗ್ರಾಂ ಟ್ರೈಕೋಡರ್ಮಾದಿಂದ ಉಪಚರಿಸಿ ಬಿತ್ತುವುದರಿಂದ ಬೀಜದಿಂದ ಹರಡುವ ಶಿಲೀಂಧ್ರ ರೋಗ ತಡೆಗಟ್ಟಬಹುದು ಎಂದರು.

ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್ ಮಾತನಾಡಿ, ಆಹಾರದಲ್ಲಿ ಸಿರಿಧಾನ್ಯ, ತರಕಾರಿ ಬಳಸುವುದರಿಂದ ಆರೋಗ್ಯದ ಸಮತೋಲನ ಹೊಂದಬಹುದೆಂದರು.

ಮಿತವಾದ ಆಹಾರ, ದೈಹಿಕ ವ್ಯಾಯಾಮ ಮತ್ತು ಶುಚಿತ್ವವನ್ನು ದೈನಂದಿನ ಚಟುವಟಿಕೆಯಲ್ಲಿ ರೂಢಿಸಿಕೊಂಡರೆ ಉತ್ತಮ ಮನಸ್ಥಿತಿ ಬೆಳೆಸಿ ಕೊಳ್ಳಬಹುದು ಎಂದು ಹೇಳಿದರು.

ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣಮೂರ್ತಿ ಮತ್ತು 20ಕ್ಕೂ ಅಧಿಕ ರೈತರು ತರಬೇತಿ ಕಾರ್ಯಕ್ರಮದಲ್ಲಿದ್ದರು.

error: Content is protected !!