ಹಿರೇಬಾಸೂರು : ಕೆರೆ ಹೂಳೆತ್ತುವ ಯೋಜನೆ : ಗ್ರಾಮಸ್ಥರ ಆರೋಪ

ಹಿರೇಬಾಸೂರು : ಕೆರೆ ಹೂಳೆತ್ತುವ ಯೋಜನೆ : ಗ್ರಾಮಸ್ಥರ ಆರೋಪ

ಸಾಸ್ವೆಹಳ್ಳಿ, ಮೇ 22- ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬಾಸೂರು ಗ್ರಾಮದ ಕೆರೆಯ ಹೂಳನ್ನು ಅವೈಜ್ಞಾನಿಕವಾಗಿ ತೆಗೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆ ಗ್ರಾಮಸ್ಥರಿಂದ ಕೆರೆಯ ಒಡ್ಡಿಗೆ ಕಲ್ಲುಗಳಿಂದ ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಮತ್ತು ಬುಧವಾರ ನರೇಗಾ ಯೋಜನೆಯಡಿ ಕೆರೆಯ ಮಣ್ಣನ್ನು ಕಲ್ಲಿನ ರಿವಿಟ್ ಮೆಂಟ್‌ನ ಮೇಲೆ ಹಾಕಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಜನಾರ್ದನ ಪಟೇಲ್ ದೂರಿದರು.

ಯೋಜನೆಯ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತರದೇ ಸರ್ಕಾರದ ಹಣ ಲೂಟಿ ಮಾಡುವ ಉದ್ದೇಶ ಎದ್ದು ಕಾಣುತ್ತಿದ್ದು, ತೆಗೆದ ಹೂಳನ್ನು ಕೆರೆಯಿಂದ ದೂರ ಸಾಗಿಸದೇ ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿ ಕೆರೆಯ ಮಣ್ಣನ್ನು ಕೆರೆಗೇ ಚೆಲ್ಲುವ ಯೋಜನೆ ಇದಾಗಿದೆ ಎಂದರು.

ಈ ಯೋಜನೆಯ ಹಣವನ್ನು ಕೆರೆಯ ಏರಿ ಸ್ವಚ್ಛತೆ, ಸ್ಮಶಾನದ ಅಭಿವೃದ್ಧಿ ಮತ್ತು ಕೆರೆ ತುಂಬಿಸಲು ಬಳಸ ಬಹುದಿತ್ತು. ಆದರೆ ಅಧಿಕಾರಿಗಳು ಸ್ವಾರ್ಥದಿಂದ ಈ ಕಾಮಗಾರಿ ಮಾಡುತ್ತಿರಬಹುದು ಎಂದು ನರಸಿಂಹಪ್ಪ ಆಕ್ಷೇಪಿಸಿದರು.

ಕೆರೆಯ ಮಣ್ಣನ್ನು ಅಲ್ಲಿಯೇ ಹಾಕುವುದರಿಂದ ಮಳೆ ಬಂದಾಗ ಮತ್ತೆ ಕೆರೆಗೆ ಬರುತ್ತದೆ ಆದ್ದರಿಂದ ಹೂಳನ್ನು ಹೊರ ಸಾಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಈ ವೇಳೆ ಹಿರೇಬಾಸೂರು ಗ್ರಾಮದ ತಾರಕೇಶ್ವರ, ಸಂಪತ್ ಕುಮಾರ್, ಲಿಂಗರಾಜಯ್ಯ, ಎಚ್.ಎಂ ಹನುಮಂತಪ್ಪ, ಎಂ.ಜಿ. ಹನುಮಂತಪ್ಪ, ಬಿ.ಜಿ. ಲಿಂಗರಾಜ್, ಎಂ.ಎಚ್. ಹನುಮಂತಪ್ಪ, ಗೋಪಾಲ್ ಮತ್ತು ಗ್ರಾಮಸ್ಥರಿದ್ದರು.

error: Content is protected !!