ಎಲ್ಲೆಡೆ ಸಂಭ್ರಮದ ಹನುಮ ಜಯಂತಿ

ಎಲ್ಲೆಡೆ ಸಂಭ್ರಮದ  ಹನುಮ ಜಯಂತಿ

ದಾವಣಗೆರೆ, ಏ.23- ಶ್ರೀರಾಮನ ಪರಮ ಭಕ್ತ ಹನುಮ ಜಯಂತಿ ಅಂಗವಾಗಿ ಜಿಲ್ಲಾದ್ಯಂತ ಮಾರುತಿ ಮಂದಿರಗಳಲ್ಲಿ ಶನಿವಾರ ಶ್ರದ್ಧಾ-ಭಕ್ತಿಯಿಂದ ಪೂಜೆ, ಪುನಸ್ಕಾರ ನೆರವೇರಿಸಲಾಯಿತು.

ಬೆಳಗ್ಗೆಯಿಂದಲೇ ವಾಯು ಪುತ್ರನಿಗೆ ಮಹಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಯಿತು. ಹೋಮ-ಹವನದ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ತುಳಸಿ ಅರ್ಚನೆ ಹಾಗೂ ಮಹಾಮಂಗಳಾರತಿ ಬೆಳಗಿ ಇಷ್ಟಾರ್ಥಗಳೊಂದಿಗೆ ನಾಡಿನ ಸಮೃದ್ಧಿಗೆ ಪ್ರಾರ್ಥಿಸಲಾಯಿತು.

ಹನುಮಾನ್‌ ಜಯಂತಿ ಹಬ್ಬವನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಪವನ ಸುತನಾದ ಆಂಜನೇಯ ಸ್ವಾಮಿಯು ಈ ದಿನದಂದು ಜನಿಸಿದನು ಎನ್ನುವ ನಂಬಿಕೆಯಿದೆ. ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆದುಕೊಳ್ಳುವುದಕ್ಕಾಗಿ ಜನರು ಈ ದಿನ ಹನುಮಂತನನ್ನು ವಿಶೇಷ ರೀತಿಯಲ್ಲಿ ಪೂಜಿಸುತ್ತಾರೆ. 

ಪುರಾಣಗಳ ಪ್ರಕಾರ ನೋಡುವುದಾದರೆ ರಾಮನಿಗಿಂತ ಮುಂಚೆಯೇ ಹನುಮ ಹುಟ್ಟಿದ ಎಂಬ ನಂಬಿಕೆ ಇದೆ. ರಾಮನು ಚೈತ್ರ ಮಾಸದ ನವಮಿ ದಿನ ಹುಟ್ಟಿದರೆ, ಹನುಮ ಚೈತ್ರ ಮಾಸದ ಹುಣ್ಣಿಮೆ ದಿನ ಹುಟ್ಟಿದನು. ಪುರಾಣಗಳ ಪ್ರಕಾರ ಯಾವುದೇ ದೇವರು ಅವತಾರ ತಾಳುವ ಮುನ್ನ ಅವರಿಗಿಂತ ಅವರ ಸೇವಕ ಮುನ್ನವೇ ಅವತಾರ ತಾಳುವುದು ಸಂಪ್ರದಾಯ. ಅಂದ ಹಾಗೆ ರಾಮನ ಮುಂಚೆ ಹನುಮ ಜನ್ಮ ತಾಳಿದ ಅನ್ನುವ ಪ್ರತೀತಿ ಇದೆ.

error: Content is protected !!