ಹೊನ್ನಾಳಿಯಲ್ಲಿ ಸ್ವಾಮಿ ವಿವೇಕಾನಂದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಪ್ರತಿಭಟನೆ
ಹೊನ್ನಾಳಿ, ಏ.23- ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯನ್ನು ಖಂಡಿಸಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಸ್ವಾಮಿ ವಿವೇಕಾನಂದ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಮತ್ತು ತಾಲ್ಲೂಕು ಬಿಜೆಪಿ ಮುಖಂಡರ ವತಿಯಿಂದ ಪ್ರತಿಭಟನೆ ನಡೆಯಿತು.
ಎಲ್ಲಾ ಕಾರ್ಯಕರ್ತರು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರಿಗೆ ಮೌನಾಚರನೆ ಸಲ್ಲಿಸಿ, ಬೃಹತ್ ಮೆರವಣಿಗೆ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿಯ ಹಿರಿಯ ಮುಖಂಡ ಶಾಂತರಾಜ್ ಪಾಟೀಲ್ ಮಾತನಾಡಿ, ಸರ್ಕಾರವು ಫಯಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ಲವ್ ಜಿಹಾದ್ ಪ್ರಕರಣಗಳನ್ನು ಹತ್ತಿಕ್ಕಲು ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಆರ್. ಮಹೇಶ್ ಮಾತನಾಡಿ, ಕಾಂಗ್ರೆಸ್ನ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆ ನೇಹಾ ಹತ್ಯೆ ಖಂಡಿಸಿ, ಯಾಕೆ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರಿ ಮಾತನಾಡಿ, ವಿಧಾನ ಸೌಧದಲ್ಲಿ ಪಾಕಿಸ್ತಾನ್ ಪರ ಘೋಷನೆ, ಹಿಂದೂ ಯುವಕರ ಮೇಲೆ
ನಿರಂತರ ಹಲ್ಲೆ, ಇಂತಹ ಪ್ರಕರಣದ ಆರೋಪಿಗಳ ಬಗ್ಗೆ ರಾಜ್ಯ ಸರ್ಕಾರ ಮೃದುಧೋರಣೆ ತೋರದೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಿಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಆರೋಪಿ ಫಯಾಜ್ ವಿರುದ್ಧ ಘೋಷಣೆ ಕೂಗಿದರು.
ಭಾರತೀಯ ಕಿಸಾನ್ ಸಂಘದ ಪ್ರಾಂತ ಸಂಚಾಲಕ ಪ್ರವೀಣ್ ರಾಂಪುರ, ಅರಕೆರೆ ಹನುಮಂತಪ್ಪ, ಕೆ.ವಿ.ಚನ್ನಪ್ಪ, ರವಿ, ದೇವರಾಜ್, ನಾಗರಾಜ್, ಚನ್ನೆಶ್, ನಟರಾಜ್, ಅಜಯ್ರೆಡ್ಡಿ, ಪ್ರಭು, ಅರುಣ್ಕುಮಾರ್, ಭರತ್ ಮತ್ತು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಾರ್ಯಕರ್ತರು ಇದ್ದರು.