ಲಕ್ಕಶೆಟ್ಟಿಹಳ್ಳಿ ಗ್ರಾಮದಲ್ಲಿ ಸಂಭ್ರಮದ ಮೆರವಣಿಗೆ

ಲಕ್ಕಶೆಟ್ಟಿಹಳ್ಳಿ ಗ್ರಾಮದಲ್ಲಿ ಸಂಭ್ರಮದ ಮೆರವಣಿಗೆ

ಮಲೇಬೆನ್ನೂರು, ಏ.2- ಲಕ್ಕಶೆಟ್ಟಿಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಅಮ್ಮನವರ ಉತ್ಸವ ಮೂರ್ತಿಯ ಮೆರವಣಿಗೆ ಸಂಭ್ರಮದಿಂದ ಜರುಗಿತು.

ಗ್ರಾಮದ ದೊಡ್ಡಗೌಡ್ರ ಮನೆಯಿಂದ ದೊಡ್ಡ ಬಂಡಿಯ ರಥವನ್ನು ಹೊರಡಿಸಿ, ನಿಂಗಪ್ಪನವರ ಮನೆಗೆ ಹೋಗಿ ಪೂಜೆ ಮಾಡಿಸಿದ ನಂತರ, ಬಸವೇಶ್ವರ ದೇವಸ್ಥಾನಕ್ಕೆ ತರಲಾಯಿತು. ಗೌಡ್ರ ಮನೆಯಿಂದ ದೇವಿಯನ್ನು ಬಸವೇಶ್ವರ ದೇವಸ್ಥಾನಕ್ಕೆ ಕರೆ ತಂದು ದೊಡ್ಡ ಬಂಡಿಯ ಮೇಲೆ ಸಿಂಗರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ, ಊರಿನ ಪ್ರಮುಖ ಬೀದಿಗಳಲ್ಲಿ ಭರ್ಜರಿ ಮೆರವಣಿಗೆ ಮಾಡಲಾಯಿತು.

ತಡರಾತ್ರಿ ಗ್ರಾಮದ ಸಣ್ಣಗೌಡ್ರ ಮನೆಯಿಂದ ಘಟೆಯನ್ನು ಮತ್ತು ಬಣಕಾರ ಮನೆಯಿಂದ ಹುಲುಸಿನ ಜೋಳವನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು.

ಬುಧವಾರ ಬೆಳಗಿನ ಜಾವ 4 ರಿಂದ 6 ಗಂಟೆವರೆಗೆ ಘಟೆ ಗಡಿಗೆ ಮತ್ತು ಹಿಟ್ಟಿನ ಕೋಣವನ್ನು ಉತ್ಸವದ ಮೂಲಕ ದೇವಸ್ಥಾನಕ್ಕೆ ತಂದ ನಂತರ ಹಿಟ್ಟಿನಿಂದ ಮಾಡಿದ ಕೋಣವನ್ನು ವಧೆ ಮಾಡಿ ಚರಗ ಚೆಲ್ಲಲಾಗುವುದು.

ಗುರುವಾರ ಸಂಜೆ ಮೇಳದವರಿಂದ ಚೌಡಕಿ ಕಾರ್ಯಕ್ರಮ ಮತ್ತು ರಾತ್ರಿ 9 ಗಂಟೆಗೆ ಗ್ರಾಮದ ಮಾರುತಿ ನಾಟ್ಯ ಸಂಘದವರಿಂದ `ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನ’ ನಾಟಕ ಪ್ರದರ್ಶನಗೊಳ್ಳಲಿದೆ.

ಶುಕ್ರವಾರ ಬೆಳಿಗ್ಗೆ ಮುತ್ತೈದೆಯರಿಂದ ದೇವಿಗೆ ತಾಳಿ, ಕಡಗ ಹಾಕಿಸಿ, ಉಡಿ ತುಂಬುವ ಕಾರ್ಯಕ್ರಮದ ನಂತರ ರೈತರಿಂದ ಹುಲುಸಿನ ಜೋಳವನ್ನು ಹಂಚುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

error: Content is protected !!