ಹೊನ್ನಾಳಿ,ಏ. 1- ತಾಲ್ಲೂಕಿನ ಕೋಟೆಮಲ್ಲೂರು ತಾಂಡಾದ ಕಾಡಿನ ಹತ್ತಿರವಿರುವ ಜಮೀನಿನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯಾಧಿಕಾರಿಗಳು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ : ಸೋಮವಾರ ಬೆಳಿಗ್ಗೆ 8.30ಕ್ಕೆ ಮೆಕ್ಕೆಜೋಳದ ಬೆಳೆ ಬೆಳೆಯಲಾಗಿದ್ದ ಜಮೀನಿಗೆ ರೈತ ಸುಧಾಕರ್ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಚಿರತೆ ಅವಿತು ಕೂತು ಕೊಂಡಿದ್ದನ್ನು ಗಮನಿಸಿದ ಅವರು ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿಗಳ ಸಿಬ್ಬಂದಿ ವರ್ಗದ ಸತೀಶ್, ಸದನ್, ಹನುಮಂತಪ್ಪ ಮತ್ತಿತರರು ಹಾಗೂ ಗ್ರಾಮಸ್ಥರ ಸಹಾಯದಿಂದ 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದರು. ಕಾರ್ಯಾಚರಣೆ ವೇಳೆ ಚಿರತೆ ಗಾಬರಿಗೊಂಡು ಜನರ ಗುಂಪಿನ ಮೇಲೆ ಎರಗಲು ಪ್ರಯತ್ನಿಸಿದಾಗ ಕೆಲವರು ಕಲ್ಲು ಎಸೆದಿದ್ದರ ಪರಿಣಾಮ ಚಿರತೆಯ ಹೊಟ್ಟೆ ಭಾಗದಲ್ಲಿ ಪೆಟ್ಟಾಗಿದ್ದು, ದಾವಣಗೆರೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಸ್.ವಿ.ಮಂಜುನಾಥ್ ಅವರು ಡಿಸಿಎಫ್ ಶಶಿಧರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ನಂತರ ವೈದ್ಯರಿಂದ ತಪಾಸಣೆಗೊಳಪಡಿಸಿ ದಾವಣಗೆರೆ ಸಮೀಪದ ಆನಗೋಡು ಮೃಗಾಲಯಕ್ಕೆ ಬಿಟ್ಟು ಬರಲಾಗಿದೆ ಎಂದು ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.