ಉರಿಯುವುದ ನಿಲ್ಲಿಸಿ ಸಿಡಿಯುವ ತಾರೆಗಳು

ಉರಿಯುವುದ ನಿಲ್ಲಿಸಿ ಸಿಡಿಯುವ ತಾರೆಗಳು

ಸೂಪರ್‌ನೋವಾಗಳಿಂದ ಆಗುವ ಅಪಾಯದ ಬಗ್ಗೆ ವಿಜ್ಞಾನಿಗಳ ಲೆಕ್ಕಾಚಾರ

ಸೂರ್ಯನಂತಹ ತಾರೆಗಳು ನಿರಂತರವಾಗಿ ಉರಿಯುತ್ತವೆ. ದಶಕಗಳೇ ಉರುಳಿದರೂ, ಅವುಗಳಿಂದ ಹೊರ ಬರುವ ಬೆಳಕಿನಲ್ಲಿ ಶೇ.0.1ರಷ್ಟು ಮಾತ್ರ ವ್ಯತ್ಯಾಸವಾಗುತ್ತದೆ. ಸೂರ್ಯ ಮುಂದಿನ 5 ಶತಕೋಟಿ ವರ್ಷಗಳವರೆಗೆ ನಿರಂತರವಾಗಿ ಉರಿಯಲಿದ್ದಾನೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸೂರ್ಯನಂತಹ ನಕ್ಷತ್ರಗಳಲ್ಲಿನ ಅಣು ಶಕ್ತಿ ಖಾಲಿಯಾದ ನಂತರ, ಅವು ಬೃಹತ್ತಾಗಿ ಬೆಳೆಯುತ್ತವೆ. ನಂತರ ಕುಬ್ಜವಾಗುತ್ತವೆ. ಇವುಗಳನ್ನು ಶ್ವೇತ ಕುಬ್ಜ ಎಂದು ಕರೆಯಲಾಗುತ್ತದೆ. ಆದರೆ, ಸೂರ್ಯನಿಗಿಂತ ಎಂಟು ಪಟ್ಟಿಗೂ ದೊಡ್ಡದಾದ ನಕ್ಷತ್ರಗಳು ದೈತ್ಯ ಪ್ರಮಾಣದಲ್ಲಿ ಸಿಡಿಯುವ ಮೂಲಕ ಅಂತ್ಯ ಕಾಣುತ್ತವೆ. ಇದನ್ನು ಸೂಪರ್‌ನೋವಾ ಎಂದು ಕರೆಯಲಾಗುತ್ತದೆ.

ನಮ್ಮ ನಕ್ಷತ್ರ ಪುಂಜವಾದ ಕ್ಷೀರ ಪಥದಲ್ಲಿ ಶತಮಾನದಲ್ಲಿ ಕೈ ಬೆರಳೆಣಿಕೆಯಷ್ಟು ಬಾರಿ ಸೂಪರ್‌ ನೋವಾ ಉಂಟಾಗುತ್ತದೆ. ಇವು ದೊಡ್ಡ ಪ್ರಮಾಣದಲ್ಲಿ ದ್ದರೂ ಸಹ, ಭೂಮಿಗಿಂತ ಸಾಕಷ್ಟು ದೂರದಲ್ಲಿರುತ್ತವೆ. ಇವುಗಳನ್ನು ಭೂಮಿಯಿಂದ ಸರಿಯಾಗಿ ನೋಡಲೂ ಸಾಧ್ಯವಾಗುವುದಿಲ್ಲ. ಭೂಮಿಯ ಮೇಲೆ ಏನಾದರೂ ಪರಿಣಾಮವಾಗಬೇಕು ಎಂದರೆ, ಸೂಪರ್‌ನೋವಾಗಳು ಭೂಮಿಯ 100 ಬೆಳಕಿನ ವರ್ಷಗಳ ವ್ಯಾಪ್ತಿಯಲ್ಲಿರಬೇಕು.

ಕೆಲವೇ ನಕ್ಷತ್ರಗಳು ಮಾತ್ರ ಸೂಪರ್‌ನೋವಾ ರೀತಿಯಲ್ಲಿ ಅವಸಾನ ಕಾಣುತ್ತವೆ. ಈ ರೀತಿಯ ಸೂಪರ್‌ನೋವಾ ಸಂಭವಿಸಿದಾಗ, ಅವುಗಳಿಂದ ಬರುವ ಬೆಳಕು ನೂರಾರು ಕೋಟಿ ನಕ್ಷತ್ರಗಳಿಗೆ ಸಮನಾಗಿರುತ್ತದೆ. ವಿಶ್ವದಲ್ಲಿ 100 ಶತಕೋಟಿ ನಕ್ಷತ್ರಪುಂಜಗಳಿವೆ. ಹೀಗಾಗಿ ಪ್ರತಿ ಕ್ಷಣದಲ್ಲೂ ಎಲ್ಲೋ ಒಂದು ಮೂಲೆಯಲ್ಲಿ ಸೂಪರ್‌ನೋವಾ ಸಂಭವಿಸುತ್ತಲೇ ಇರುತ್ತದೆ.

ಈ ರೀತಿ ಸಿಡಿಯುವ ನಕ್ಷತ್ರಗಳು ಗಾಮಾ ಕಿರಣಗಳನ್ನು ಹೊರ ಹಾಕುತ್ತವೆ. ಇವುಗಳ ತರಂಗಾಂತರ ಬೆಳಕಿಗಿಂತ ಸಾಕಷ್ಟು ಕಡಿಮೆ ಇರುತ್ತದೆ. ಹೀಗಾಗಿ ಬರಿಗಣ್ಣಿನಿಂದ ಇವುಗಳನ್ನು ನೋಡಲಾಗದು. 

ಕ್ಷೀರಪಥದಲ್ಲಿ ಸೂಪರ್‌ನೋವಾ ಸಂಭವಿಸುವುದು ಅಪರೂಪ. ಆದರೂ, ಕೆಲವು ಭೂಮಿಗೆ ಅತ್ಯಂತ ಸಮೀಪದಲ್ಲಿ ಸಂಭವಿಸಿವೆ. 185ನೇ ಇಸವಿಯಲ್ಲಿ ಹಿಂದೆಂದೂ ಕಾಣದೇ ಇದ್ದ ಸ್ಥಳದಲ್ಲಿ ನಕ್ಷತ್ರವೊಂದು ಕಂಡು ಬಂದಿತ್ತು. ಇದು ಸೂಪರ್‌ನೋವಾ ಇರಬೇಕು ಎಂದು ಅಂದಾಜಿಸಲಾಗಿದೆ.

1006ನೇ ಇಸವಿಯಲ್ಲೂ ಹಠಾತ್ತನೇ ನಕ್ಷತ್ರವೊಂದು ಕಂಡು ಬಂದಿತ್ತು. ಇದು 7,200 ನಕ್ಷತ್ರ ವರ್ಷಗಳ ದೂರದಲ್ಲಿ ಸಂಭವಿಸಿದ ಸೂಪರ್‌ನೋವಾ ಎಂದು ಖಗೋಳಶಾಸ್ತ್ರಜ್ಞರು ನಂತರ ಗುರುತಿಸಿದ್ದರು. 1054ರಲ್ಲಿ ಚೀನಾದಲ್ಲಿ ಹಗಲು ಹೊತ್ತಿನಲ್ಲೇ ನಕ್ಷತ್ರವೊಂದು ಕಾಣಿಸಿ ಕೊಂಡಿತ್ತು. ಇದು 6,500 ನಕ್ಷತ್ರ ವರ್ಷಗಳ ದೂರದ ಸೂಪರ್‌ನೋವಾ ಎಂದು ನಂತರ ಗುರುತಿಸಲಾಗಿತ್ತು.

1604ನೇ ಇಸವಿಯಲ್ಲಿ ಕ್ಷೀರಪಥದಲ್ಲಿ ಕೊನೆಯ ಸೂಪರ್‌ನೋವಾ ಸಂಭವಿಸಿತ್ತು ಎಂದು ಜೊಹಾನ್ಸ್‌ ಕೆಪ್ಲರ್ ವೀಕ್ಷಣಾಲಯದ ಮಾಹಿತಿ ತಿಳಿಸಿದೆ.  ಈ ಸೂಪರ್‌ನೋವಾ 600 ಬೆಳಕಿನ ವರ್ಷಗಳ ದೂರದಲ್ಲಿತ್ತು.

ಸೂಪರ್‌ನೋವಾಗಳಿಂದ ವಿಕಿರಣ ಹಾನಿಯಾಗು ತ್ತದೆ. ಸುಮಾರು 25 ಲಕ್ಷ ವರ್ಷಗಳ ಹಿಂದೆ ಭೂಮಿಗೆ 300 ಕಿ.ಮೀ. ದೂರದಲ್ಲಿ ಸೂಪರ್‌ನೋವಾ ಸಂಭವಿಸಿತ್ತು. ಇದರಿಂದ ಬಂದ ಗಾಮಾ ಕಿರಣಗಳು ಓಜೋನ್ ಪದರಕ್ಕೆ ಹಾನಿ ಮಾಡಿದ್ದವು. ಓಜೋನ್ ಪದರ ಸೂರ್ಯನಿಂದ ಬರುವ ಹಾನಿಕಾರಕ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಓಜೋನ್ ಹಾನಿಯಿಂದ ಹಲವಾರು ಪ್ರಭೇದಗಳು ನಾಶವಾಗಿದ್ದವು.

ಸೂಪರ್‌ನೋವಾದ ಗಾಮಾ ಕಿರಣಗಳು ಎಲ್ಲ ದಿಕ್ಕುಗಳಿಗೂ ಹರಡುತ್ತವೆ. ಹೀಗಾಗಿ ಸೂಪರ್‌ನೋವಾ ದಿಂದ ದೂರವಿದ್ದಷ್ಟು ಹೆಚ್ಚು ಸುರಕ್ಷತೆ. 

30 ಬೆಳಕಿನ ವರ್ಷಗಳ ವ್ಯಾಪ್ತಿಯಲ್ಲಿ ಸೂಪರ್‌ನೋವಾ ಸಂಭವಿಸಿದರೆ, ಓಜೋನ್ ಪದರಕ್ಕೆ ತೀವ್ರ ಹಾನಿಯಾಗುತ್ತದೆ. ಇದರಿಂದ ಜಲಚರಗಳಿಗೆ ಮೊದಲು ಹಾನಿಯಾಗುತ್ತದೆ. ನಂತರ ಸಮೂಹ ನಾಶವೇ ಉಂಟಾಗುತ್ತದೆ. 360ರಿಂದ 375 ದಶಲಕ್ಷ ವರ್ಷಗಳ ಹಿಂದೆ ಸೂಪರ್‌ನೋವಾದಿಂದ ಈ ರೀತಿಯ ಸಮೂಹ ನಾಶವಾಗಿರಬಹುದು ಎಂದು ಕೆಲ ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಅದೃಷ್ಟವಶಾತ್, 30 ಬೆಳಕಿನ ವರ್ಷಗಳ ವ್ಯಾಪ್ತಿಯಲ್ಲಿ ಈ ರೀತಿಯ ಸೂಪರ್‌ನೋವಾ ಸಂಭವಿಸುವ ಸಾಧ್ಯತೆ ನೂರಾರು ದಶಲಕ್ಷ ವರ್ಷಗಳಿಗೆ ಒಮ್ಮೆ ಮಾತ್ರ ಇದೆ.

ಆದರೆ, ಕೇವಲ ಸೂಪರ್‌ನೋವಾ ಕಾರಣದಿಂದ ಗಾಮಾ ಕಿರಣಗಳು ಬರುತ್ತವೆ ಎಂದೇನೂ ಅಲ್ಲ. ನ್ಯೂಟ್ರನ್‌ ನಕ್ಷತ್ರಗಳು ಡಿಕ್ಕಿ ಹೊಡೆಯುವುದರಿಂದಲೂ ಗಾಮಾ ಕಿರಣಗಳಿಂದ ಹಿಡಿದು ಗುರುತ್ವಾಕರ್ಷಣ ಅಲೆಯವರೆಗೆ ಹಲವು ಪರಿಣಾಮಗಳು ಉಂಟಾಗುತ್ತವೆ.

ಸೂಪರ್‌ನೋವಾ ಸ್ಫೋಟದ ನಂತರ ನ್ಯೂಟ್ರನ್ ತಾರೆಗಳು ಉಳಿದುಕೊಳ್ಳುತ್ತವೆ. ಇವುಗಳು ನಗರವೊಂದರ ಗಾತ್ರದಲ್ಲಿರುತ್ತವೆ. ಆದರೆ, ಅವುಗಳ ಸಾಂದ್ರತೆ ಸೂರ್ಯನಿಗಿಂತ 300 ಟ್ರಿಲಿಯನ್ ಪಟ್ಟು ಹೆಚ್ಚಾಗಿರುತ್ತದೆ. ಇವುಗಳು ಡಿಕ್ಕಿ ಹೊಡೆದಾಗ ನ್ಯೂಟ್ರಾನ್‌ಗಳು ಅಟಾಮಿಕ್ ನ್ಯೂಕ್ಲಿಯೈ ಆಗಿ ಪರಿಣಮಿಸುತ್ತವೆ. ಇದರಿಂದ ಬಂಗಾರ ಹಾಗೂ ಪ್ಲಾಟಿನಂ ರೀತಿಯ ಲೋಹಗಳೂ ಸೃಷ್ಟಿಯಾಗುತ್ತವೆ.

ನ್ಯೂಟ್ರನ್ ತಾರೆಯು ಡಿಕ್ಕಿಯ ನಂತರ ತೀವ್ರ ಸ್ವರೂಪದ ಗಾಮಾ ಕಿರಣ ಉತ್ಪಾದಿಸುತ್ತದೆ. ಭೂಮಿಗೆ 10 ಸಾವಿರ ಬೆಳಕಿನ ವರ್ಷಗಳ ದೂರದಲ್ಲಿ ಈ ಡಿಕ್ಕಿ ಉಂಟಾದರೂ, ಓಜೋನ್ ಪದರಕ್ಕೆ ಹಾನಿಯಾಗುತ್ತದೆ. ಇದರಿಂದ ಬ್ಯಾಕ್ಟೀರಿಯಾ ರೀತಿಯ ಸರಳ ಸ್ವರೂಪದ ಜೀವಿಗಳು ನಾಶವಾಗಬಹುದು.

ಆದರೆ, ಅದೃಷ್ಟವಶಾತ್ ನ್ಯೂಟ್ರನ್ ತಾರೆಗಳು ಜೋಡಿಯಾಗಿ ಹುಟ್ಟಿಕೊಳ್ಳುವುದಿಲ್ಲ. ಕಳೆದ 10 ಸಾವಿರ ವರ್ಷಗಳಲ್ಲಿ ಕ್ಷೀರಪಥದಲ್ಲಿ ಕೇವಲ ಒಂದು ನ್ಯೂಟ್ರನ್ ತಾರೆಗಳ ಡಿಕ್ಕಿ ಸಂಭವಿಸಿದೆ. ಇವುಗಳು ಸೂಪರ್‌ನೋವಾ ಸ್ಫೋಟಗಳಿಗಿಂತ ನೂರು ಪಟ್ಟು ಅಪರೂಪ.

ನಿಕಟ ಭವಿಷ್ಯದಲ್ಲಿ ಇಂತಹ ಗಾಮಾ ಕಿರಣಗಳಿಂದ ಭೂಮಿಗೆ ಹಾನಿಯಿಲ್ಲ. ಆದರೆ, ದೀರ್ಘಾವಧಿಯಲ್ಲಿ ಭೂಮಿ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲಾಗದು. 

2022ರ ಅಕ್ಟೋಬರ್‌ನಲ್ಲಿ ಗಾಮಾ ಕಿರಣಗಳ ಅಲೆ ಕಂಡು ಬಂದಿತ್ತು. ಇದು ಭೂಮಿಯಲ್ಲಿ ಮಾನವ ನಾಗರಿಕತೆ ರೂಪುಗೊಂಡ ನಂತರ ಕಂಡು ಬಂದ ಅತಿ ದೊಡ್ಡ ಪ್ರಮಾಣದ ಗಾಮಾ ಕಿರಣಗಳ ಅಲೆಯಾಗಿತ್ತು. ಈ ಸ್ಫೋಟದ ಮೂಲ 2 ಶತಕೋಟಿ ಬೆಳಕಿನ ವರ್ಷಗಳಷ್ಟು ದೂರವಿತ್ತು. ಭೂಮಿಯ ಮೇಲಿನ ಜೀವಿಗಳ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ಒಂದು ವೇಳೆ ಕ್ಷೀರಪಥದಲ್ಲಿ ಈ ಸ್ಫೋಟ ಸಂಭವಿಸಿದ್ದರೆ, ಅದರ ಪರಿಣಾಮ ಕನಿಷ್ಠ ದಶಲಕ್ಷ ಪಟ್ಟು ಹೆಚ್ಚಾಗಿರುತ್ತಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಗಾಮಾ ಕಿರಣಗಳಿಂದ ಆಗಬಹುದಾದ ಹಾನಿಯ ಎಚ್ಚರಿಕೆಯ ಗಂಟೆಯೂ ಆಗಿದೆ.

(ಸಂಗ್ರಹ)

error: Content is protected !!