ಜಗಳೂರಿನಲ್ಲಿ ಕಾಂಗ್ರೆಸ್ ಬೆಂಬಲಿಗರ ಸಭೆ ಟಿಕೆಟ್ ಸಿಗುವ ವಿಶ್ವಾಸವಿದೆ : ವಿನಯ್ ಕುಮಾರ್

ಜಗಳೂರಿನಲ್ಲಿ  ಕಾಂಗ್ರೆಸ್ ಬೆಂಬಲಿಗರ ಸಭೆ ಟಿಕೆಟ್ ಸಿಗುವ ವಿಶ್ವಾಸವಿದೆ : ವಿನಯ್ ಕುಮಾರ್

 ಜಗಳೂರು, ಮಾ. 1 – ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರಿದ್ದು ನನಗೇ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಪಕ್ಷದ ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು. 

ಕಾಂಗ್ರೆಸ್ ವೀಕ್ಷಕರ ಸಭೆಯಲ್ಲಿ ನನ್ನ ಪರವಾಗಿ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚು ಒಲವು ವ್ಯಕ್ತಪಡಿಸಿದ್ದರೂ ಸಹ ವೀಕ್ಷಕರ ವರದಿಯಿಂದ ನನ್ನ ಹೆಸರನ್ನು ಕೈ ಬಿಡಲಾಗಿತ್ತು. ನನ್ನಂತಹ ಸಾಮಾನ್ಯನ ಬೆಳವಣಿಗೆ ಕೆಲವರಿಗೆ ಭಯ ಹುಟ್ಟಿಸಿದೆ. ಟಿಕೆಟ್ ಗಾಗಿ ನಾನು ದೆಹಲಿಯವರೆಗೆ ಏಕಾಂಗಿ ಹೋರಾಟ ನಡೆಸುತ್ತಿದ್ದೇನೆ. ನನ್ನ ಪರವಾಗಿ ಯಾವ ಶಾಸಕರೂ ಬರುತ್ತಿಲ್ಲ. ನಾನು ಹಳ್ಳಿಗಳಲ್ಲಿ ಪಾದಯಾತ್ರೆ ಮಾಡುವಾಗ ಕೆಲವರು ಪಕ್ಷದ ಮುಖಂಡರಿಗೆ ಕರೆ ಮಾಡಿ ಪಾದಯಾತ್ರೆಯಲ್ಲಿ ಭಾಗವಹಿಸಬೇಡಿ ಎಂದು ದುಂಬಾಲು ಬಿದ್ದಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

ಜಗಳೂರು ತಾಲ್ಲೂಕಿಗೆ ಐಐಟಿ ಮಂಜೂರಾಗಬೇಕು ಭದ್ರಾ ಅಚ್ಚುಕಟ್ಟು ರೈತರ ಸಮಸ್ಯೆ ಪರಿಹಾರವಾಗಬೇಕು. ಏತ ನೀರಾವರಿ ಯೋಜನೆ ಶೀಘ್ರವಾಗಿ ಜಾರಿಯಾಗಬೇಕು ಎಂದು ವಿನಯ್ ಕುಮಾರ್ ಹೇಳಿದರು.

ವಕೀಲರಾದ ಮರೆನಹಳ್ಳಿ ಬಸವರಾಜ್ ಮಾತನಾಡಿ, ಜನಪರ ಕಾಳಜಿ ಹೊಂದಿರುವ ವಿದ್ಯಾವಂತ ವಿನಯ್ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಯು.ಜಿ. ಶಿವಕುಮಾರ್, ತಾಲ್ಲೂಕು ಯಾದವ ಸಮಾಜದ ಅಧ್ಯಕ್ಷ ಹೊನ್ನಮರಡಿ ಕೃಷ್ಣಮೂರ್ತಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಪ್ರಕಾಶ್ ರೆಡ್ಡಿ, ನರೇನಹಳ್ಳಿ  ಕುಮಾರ್, ತಾನಾಜಿ ಗೋಸಾಯಿ, ನಾಗರಾಜು, ತಿಮ್ಮರಾಜು, ವಕೀಲರಾದ ಶಿವಪ್ರಕಾಶ್ ರವಿ, ಮಾರನಾಯಕ ಸೇರಿದಂತೆ ನೂರಾರು ಜನ ಬೆಂಬಲಿಗರು ಭಾಗವಹಿಸಿದ್ದರು.

error: Content is protected !!