ಚನ್ನಗಿರಿ, ಡಿ. 14 – ಕರ್ನಾಟಕದಲ್ಲಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಗಳು ಕನ್ನಡ ಮಾಧ್ಯಮದಲ್ಲಿಯೇ ಪರಿಣಾಮಕಾರಿಯಾಗಿ ಸಿಗುವಂತಾದರೆ ವಿಜ್ಞಾನ-ತಂತ್ರಜ್ಞಾನದ ಈ ಆಧುನಿಕ ಯುಗದಲ್ಲೂ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಉಳಿಯಲು ಸಾಧ್ಯವಿದೆ ಎಂದು ಶಿಕ್ಷಕ, ಯುವ ಗಾಯಕ ಎಂ.ಮಾರುತಿ ಅಭಿಪ್ರಾಯಪಟ್ಟರು.
ಸಂತೇಬೆನ್ನೂರಿನ ಸರ್ಕಾರಿ ಎಸ್ಜೆವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಕಸಾಪ ದತ್ತಿ ಉಪನ್ಯಾಸದಲ್ಲಿ `ವೈಜ್ಞಾನಿಕ ಯುಗದಲ್ಲಿ ಕನ್ನಡ ಭಾಷಾ ಪ್ರೇಮ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಡಿ.ಎಸ್.ಕರ್ಕಿಯವರ ಗೀತೆಯಂತೆ ಮನೆ-ಮನೆಗಳಲ್ಲಿ, ಮನ-ಮನಗಳಲ್ಲಿ ಕನ್ನಡದ ದೀಪ ಬೆಳಗಿಸಲು ಪ್ರಯತ್ನಿಸಿದಾಗ ಭವ್ಯ ಇತಿಹಾಸವಿರುವ ಕನ್ನಡ ಭಾಷೆ ಕನ್ನಡ ನಾಡಿನಲ್ಲಿ ಹಾಸುಹೊಕ್ಕಾಗಲು ಸಾಧ್ಯವಿದೆ ಎಂದು ಹೇಳಿ ಕನ್ನಡವನ್ನು ಪ್ರೀತಿಸಿ, ಪರಭಾಷೆಗಳನ್ನು ಗೌರವಿಸಿ ಅವಶ್ಯಕತೆಗನುಗುಣವಾಗಿ ಕಲಿಯುವುದು ಹಾಗು ಬಳಸುವುದು ಅನಿವಾರ್ಯವಾಗಿದೆ. ಆದರೆ ಪರಭಾಷೆಗಳ ಆಕರ್ಷಣೆಯಲ್ಲಿ ತಾಯ್ನುಡಿಯನ್ನು ಮೂಲೆಗುಂಪಾಗಿಸಬಾರದು ಎಂದರು.
ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಸಿ.ಎನ್.ಆರ್.ರಾವ್, ಸರ್.ಎಂ.ವಿಶ್ವೇಶ್ವರಯ್ಯ, ಡಾ.ರಾಜಾರಾಮಣ್ಣ, ಉದ್ಯಮಿ ಸುಧಾಮೂರ್ತಿ, ಲೇಖಕಿ ನೇಮಿಚಂದ್ರ ಮೊದಲಾದವರು ತಮ್ಮ ಕ್ಷೇತ್ರ ಬೇರೆಯಾದರೂ ಅಪ್ಪಟ ಕನ್ನಡಿಗರಾಗಿ ಮಾಡಿರುವ ಸಾಧನೆ ಯುವ ಜನತೆಗೆ ಸ್ಪೂರ್ತಿಯಾಗಬೇಕಿದೆ ಎಂದರು.
ಕೇಂದ್ರ ಸರ್ಕಾರದ ಸಂಸ್ಥೆಗಳು ಕರ್ನಾಟಕದಲ್ಲಿ ಪ್ರಾದೇಶಿಕ ಭಾಷೆಯನ್ನು ತ್ರಿಭಾಷಾ ಸೂತ್ರದನ್ವಯ ಬಳಕೆ ಮಾಡಿ ಅನುಪಾಲನೆ ಮಾಡಿದರೆ ರೈಲ್ವೆ, ವಿಮಾನ, ಬ್ಯಾಂಕಿಂಗ್, ಅಂಚೆ ಮುಂತಾದವುಗಳ ಸಂವಹನದಲ್ಲಿ ಕನ್ನಡಕ್ಕೆ ಇನ್ನಷ್ಟು ಉನ್ನತ ಸ್ಥಾನ ದೊರೆಯುವಲ್ಲಿ ಸಂಶಯವಿಲ್ಲ. ಆದಾಗ್ಯೂ ಕನ್ನಡಿಗರಾದ ನಾವು ಮಾತೃಭಾಷೆಯನ್ನು ಹೃದಯ ಭಾಷೆಯಾಗಿಸಿಕೊಂಡು ವಿಜ್ಞಾನ ದೀವಿಗೆ ಹಿಡಿದು ಸಾಗೋಣವೆಂದು ಆಶಿಸಿದರು.
ಚನ್ನಗಿರಿ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸ್ವಾಮಿ ಬಿ.ಜಿ., ಸಂತೇಬೆನ್ನೂರು ಕಸಾಪ ಹೋಬಳಿ ಘಟಕದ ಅಧ್ಯಕ್ಷ ಜಗದೀಶ್ ಗೌಡ್ರು, ಸಾಹಿತಿ ಫೈಜ್ನಟ್ರಾಜ್ ಮಾತನಾಡಿದರು. ಪ್ರಾಂಶುಪಾಲ ಎ.ಟಿ.ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರವೀಣ್, ರೇವಣಸಿದ್ದಪ್ಪ, ಮಧು, ರಂಗಸ್ವಾಮಿ, ಮತ್ತಿತರರು ಇದ್ದರು.