ಗ್ರಂಥಾಲಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶಿ

ಗ್ರಂಥಾಲಯಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶಿ

ಹರಿಹರ : ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ಬಿ.ಬಿ.ರೇವಣನಾಯ್ಕ

ಹರಿಹರ, ನ.21- ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುವ ಗ್ರಂಥಾಲಯಗಳು ಜ್ಞಾನಾರ್ಜನೆಯ ದೀವಿಗೆಗಳು ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆ  ಮುಖ್ಯೋಪಾಧ್ಯಾಯ  ಬಿ.ಬಿ.ರೇವಣನಾಯ್ಕ ಅಭಿಪ್ರಾಯಿಸಿದರು.

ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ   ಇವರ ಸಹಯೋಗದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಗ್ರಂಥಾಲಯ ಸಪ್ತಾಹದ ಸಮಾರೋಪದ ಸಮಾರಂಭದಲ್ಲಿ ಮಾತನಾಡಿದರು.  

ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಅದರಿಂದ ಅವರಿಗೆ ಶೈಕ್ಷಣಿಕವಾಗಿ ಯಾವುದೇ ಪ್ರಯೋಜನ ವಾಗುವುದಿಲ್ಲ ಆದರೆ ಪುಸ್ತಕಗಳನ್ನು ಓದುವುದರಿಂದ ಅವರ ಜ್ಞಾನಾರ್ಜನೆಗೆ ಪೂರಕವಾಗಿ ಅವರ ಉನ್ನತಿ ಸಾಧ್ಯ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸುಬ್ರಹ್ಮಣ್ಯ ನಾಡಿಗೇರ್ ಮಾತನಾಡಿ, ಗ್ರಂಥಾಲಯಗಳು ಮಾನವನ ವಿಕಾಸಕ್ಕೆ ಅತ್ಯುತ್ತಮವಾದ ಸಾಧನವಾಗಿವೆ. ಇದನ್ನು ಮನಗಂಡು ಗ್ರಂಥಾಲಯದ ಪಿತಾಮಹ ಎನಿಸಿಕೊಂಡಿರುವ ಡಾ.ಎಸ್.ಆರ್.ರಂಗನಾಥನ್   ಗ್ರಂಥಾಲಯಗಳ ಸ್ಥಾಪನೆಯನ್ನು ಮಾಡುವುದರ ಮೂಲಕ  ನಮ್ಮೆಲ್ಲರಿಗೆ ಆದರ್ಶ ಎನಿಸಿದ್ದಾರೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀಮತಿ ಡಿ.ಎನ್.ಶಾಂಭವಿ ನಾಗರಾಜ್ ಮಾತನಾಡಿ, ಮಕ್ಕಳಿಗೆ ಗ್ರಂಥಾಲಯದ ಮಹತ್ವವನ್ನು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು   ಜಿಲ್ಲಾ ಘಟಕದ ಅಧ್ಯಕ್ಷ ಡಾ.ಡಿ.ಫ್ರಾನ್ಸಿಸ್ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ಭೇಟಿ ನೀಡಿ, ಅಲ್ಲಿರುವ ಜ್ಞಾನಾರ್ಜನೆಗೆ ಪೂರಕವಾಗಿರುವ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಕರ್ನಾಟಕದ ನಾಡು, ನುಡಿ, ಸಂಸ್ಕೃತಿಗಳ ಬಗ್ಗೆ ಮಕ್ಕಳಿಗೆ ಏರ್ಪಡಿಸಿದ್ದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಪ್ರಥಮ ಬಹುಮಾನವನ್ನು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಕು. ತನುಷಾ, ಎರಡನೇ ಬಹುಮಾನವನ್ನು ಎಂಕೆಟಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಮಹಂತೇಶ್ ಜಿ. ಮೂರನೇ ಬಹುಮಾನವನ್ನು ಎಂಕೆಇಟಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರೇಷ್ಠ ಭಾರದ್ವಾಜ್ ಪಡೆದರು.  

ಈ ಸಂದರ್ಭದಲ್ಲಿ ಹರಿಹರ ಶಾಖಾ ಗ್ರಂಥಾಲಯದ ಪ್ರಭಾರಧಾರಕ ರವಿಕುಮಾರ್   ಸರ್ಕಾರ ಹೊರಡಿಸಿರುವ ಡಿಜಿಟಲ್ ಗ್ರಂಥಾಲಯದ ಮಾಹಿತಿ ಪತ್ರದ ವಿಷಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಪುಸ್ತಕ ಭಂಡಾರ ಸಲಹಾ ಸಮಿತಿ ಸದಸ್ಯರಾದ ಶ್ರೀಮತಿ ಹೀನಾ ಕೌಸರ್,
ಡಿ. ಪ್ರಶಾಂತ್  ಮಕ್ಕಳಿಗೆ ಶುಭ ಕೋರಿದರು.   ಶಿಕ್ಷಕ ನಾಗರಾಜ್ ಸ್ವಾಗತಿಸಿದರು.   ಒನಕೇರಪ್ಪ ಕಾರ್ಯಕ್ರಮ ನಿರೂಪಿಸಿದರು.

error: Content is protected !!