ವಿದ್ಯಾರ್ಥಿ ದೆಸೆಯಿಂದಲೇ ಕಾನೂನು ಅರಿವು ಮೂಡಿಸಬೇಕು

ವಿದ್ಯಾರ್ಥಿ ದೆಸೆಯಿಂದಲೇ ಕಾನೂನು ಅರಿವು ಮೂಡಿಸಬೇಕು

ಎಲೆಬೇತೂರಿನಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಾ ಶಿಕ್ಷಕ ಡಾ. ಷಣ್ಮುಖಪ್ಪ ಕರೆ

ದಾವಣಗೆರೆ, ನ. 20 – ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಕಲಾ ಶಿಕ್ಷಕ ಡಾ. ಷಣ್ಮುಖಪ್ಪ ಎಸ್.ಓ. ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಉಪನ್ಯಾಸ ನೀಡುತ್ತಾ, ಪ್ರಸ್ತುತ ಬಾಲ್ಯ ವಿವಾಹ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಕಠಿಣ ಕಾನೂನುಗಳು ಅಗತ್ಯ ಎಂದರು. ಮೊದಲು ನಾವು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬಾಲಕಾರ್ಮಿಕ ಪದ್ಧತಿಯು ಇಂದು ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಅದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈ ಪದ್ಧತಿಯಿಂದ ಮಕ್ಕಳ ಭವಿಷ್ಯ ಹಾಳಾಗುವ ಜೊತೆಗೆ ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎಂದರು. ನಮ್ಮ ಸುತ್ತಮುತ್ತಲು ಕಂಡುಬರುವ ಬಾಲಕಾರ್ಮಿಕರನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆ ತರಲು ನಾವು ಪ್ರಯತ್ನಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಈ ಪಿಡುಗುಗಳ ಬಗ್ಗೆ ಅರಿವು ಮೂಡಿಸಿ ಹೋಗಲಾಡಿಸಲು ಕರೆ ನೀಡಿದರು. 

ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ 18 ವರ್ಷದೊಳಗಿನ ಹೆಣ್ಣುಮಕ್ಕಳು ತಮಗಾಗಿರುವ ಇಂತಹ ಲೈಂಗಿಕ ದೌರ್ಜನ್ಯವನ್ನು ಖಂಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿಗಳು ಪೋಕ್ಸೋ ಕಾಯ್ದೆ ಬಗ್ಗೆ ಅರಿಯ ಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಕೀಲ ರನ್ನು ನೇಮಕ ಮಾಡುವ ಮೂಲಕ ಸೂಕ್ತ ತಿಳುವಳಿ ಕೆಯ ಜೊತೆಗೆ ಕಾನೂನು ನೆರವು ನೀಡುತ್ತದೆ. ಪ್ರಾಧಿ ಕಾರದ ಮುಂದೆ ಸಮಸ್ಯೆಗೆ ಪರಿಹಾರ ಕೊಡಿಸುವುದು ಸುಲಭವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಎಚ್. ಬಸವರಾಜಪ್ಪ, ನಾವು ಇಂಥ ಸಾಮಾಜಿಕ ಪಿಡುಗುಗಳಿಂದ ದೂರ ಇರಬೇಕು ಹಾಗೂ ಕಾನೂನು ಅರಿವಿನ ಮುಖ್ಯ ಅಂಶಗಳನ್ನು ಬರೆದುಕೊಳ್ಳುವ ಮೂಲಕ ಅರ್ಥ ಮಾಡಿಕೊಂಡು ಮುನ್ನಡೆಯಲು ತಿಳಿಸಿದರು.

ಸ್ಥಳೀಯ ಸಲಹಾ ಸಮಿತಿಯ ಸದಸ್ಯರು ಹಾಗೂ ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರು, ಶ್ರೀಮತಿ ಆಶಾ ನಾರಪ್ಪ, ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪ್ರೇಮ ಎಂ.ಬಿ., ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಬಿ.ಎಂ., ಶಿಕ್ಷಕರಾದ ದ್ಯಾಮೇಶ್ ಹೆಚ್.ಎಸ್., ಅನಿತಾ ಎಸ್., ಗೀತಾ ಎಸ್., ನಾಗರಾಜ್ ಎಸ್.ಆರ್., ರವಿ ಎಂ.ಬಿ., ಹಾಗೂ ಬಸವರಾಜ್ ಪಾಟೀಲ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!