ಹರಪನಹಳ್ಳಿ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಜನಾರ್ದನ
ಹರಪನಹಳ್ಳಿ, ನ.20- ಮಳೆಯ ನೀರು ಶೇಖರಣೆಯಿಂದ ಕೆರೆ ಕಟ್ಟೆಗಳು ತ್ಯಾಜ್ಯ ವಸ್ತುಗಳಿಂದ ಮಲಿನವಾಗುತ್ತಿದ್ದು, ಮಲಿನವಾಗದಂತೆ ತಡೆಗಟ್ಟುವ ಕೆಲಸವನ್ನು ನಾವು ಮಾಡಬೇಕು ಎಂದು ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಜನಾರ್ದನ ಹೇಳಿದರು.
ತಾಲ್ಲೂಕಿನ ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರೇಮಾಗಾನಹಳ್ಳಿ ಗ್ರಾಮದ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ, ಎಂಟು ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಸ್ವಚ್ಛತೆ ಮರೀಚಿಕೆಯಾಗಿದೆ. ರಸ್ತೆ ಬೀದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ಸೇರಿದಂತೆ ನಮ್ಮಲ್ಲಿ ಸ್ವಚ್ಛತೆ ಬಗ್ಗೆ ಅರಿವು ಇಲ್ಲ ದಂತಾಗಿದ್ದು, ಪುರಸಭೆ, ನಗರಸಭೆ, ಗ್ರಾಮ ಪಂಚಾಯಿತಿಗಳು ಕೆರೆಕಟ್ಟಿಗಳಲ್ಲಿನ ನೀರು ಮಲಿನವಾಗದಂತೆ ಸಾರ್ವಜನಿಕ ನೊಟೀಸ್ ನೀಡುವ ಮೂಲಕ ಸ್ವಚ್ಛ ತೆಗೆ ಗಮನಹರಿಸಬೇಕು ಎಂದರು.
ರೈತ ಮುಖಂಡ ಫಣಿಯಾಪುರ ಲಿಂಗರಾಜ ಮಾತನಾಡಿ, ಈಗಿನ ಸರ್ಕಾರಗಳಲ್ಲಿ ಬರಿ ಗ್ಯಾರಂಟಿ ಹಾಗೂ ಬಸ್ ಫ್ರೀ ಮಾಡುವುದರಲ್ಲಿ ಗಮನ ಹರಿಸುತ್ತಿದ್ದಾರೆ. ರೈತ ಈ ದೇಶದ ಬೆನ್ನೆಲುಬು. ಈ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಹೂಳನ್ನು ಎತ್ತಿ ಸಾವಿರಾರು ರೈತರಿಗೆ ಆನುಕೂಲ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರಗಳು ಶ್ರೀ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಾಡಲಾಗುತ್ತಿರುವ ಇಂತಹ ಕೆಲಸಗಳನ್ನು ಮಾಡಿ ರೈತರಿಗೆ ಅನುಕೂಲತೆ ಮಾಡಿಕೊಡಬೇಕಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾ ಸತೀಶ್, ಯೋಜನಾಧಿಕಾರಿಗಳಾದ ಶಾಂತಾರಾಮ, ಇಂಜಿನಿಯರ್ ಹರೀಶ್, ಕೆರೆಯ ಸಮಿತಿ
ಅಧ್ಯಕ್ಷ ಬಸವರಾಜ ಬಣಕಾರ, ಕೆ. ಎನ್ ಪ್ರಕಾಶ್, ಕೆಂಚವೀರಪ್ಪ, ಪರಮೇಶಪ್ಪ, ಮಂಜಮ್ಮ, ಸಂಸ್ಥೆಯ ಮುಖಂಡರಾದ ಅಶೋಕ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.