ಪ್ರಶ್ನಿಸುವ ಮನೋಭಾವ ಇರಲಿ : ವಿಜ್ಞಾನಿ ದಾರುಕೇಶ್‌

ಪ್ರಶ್ನಿಸುವ ಮನೋಭಾವ ಇರಲಿ : ವಿಜ್ಞಾನಿ ದಾರುಕೇಶ್‌

ಹೊನ್ನಾಳಿ : ಇಸ್ರೋದ ವಿಜ್ಞಾನಿಯೊಂದಿಗೆ ಹಮ್ಮಿಕೊಂಡಿದ್ದ ಸಂವಾದ

ಹೊನ್ನಾಳಿ, ನ. 17 – ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಚಂದ್ರಯಾನ-3 ತಂಡದ ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಸಲಹೆ ನೀಡಿದರು.

ತಾಲ್ಲೂಕಿನ ಎಚ್. ಕಡದಕಟ್ಟೆಯ ಶ್ರೀ ಸಾಯಿ ಗುರುಕುಲ ವಸತಿಯುತ ಸಿಬಿಎಸ್‍ಇ ಶಾಲೆ ಮತ್ತು ಶ್ರೀ ಸಾಯಿ ಗುರುಕುಲ ಪಿಯುಸಿ ಕಾಲೇಜ್‍ಗಳ ಸಂಯುಕ್ತಾಶ್ರಯದಲ್ಲಿ ಇಸ್ರೋದ ವಿಜ್ಞಾನಿಯೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳು ವಿನೂತನ ಆಲೋಚನೆ ಗಳೊಂದಿಗೆ ಮತ್ತು ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ಉನ್ನತ ಸಾಧನೆ ಮಾಡಲು ಸಾಧ್ಯವೆಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಸುತ್ತ-ಮುತ್ತಲಿನ ವ್ಯವಸ್ಥೆಯಲ್ಲೂ ಕಲಿಯಲು ಸಾಕಷ್ಟು ಅವಕಾಶಗಳಿರುತ್ತವೆ. ಪ್ರತಿಯೊಂದನ್ನೂ ಪ್ರಶ್ನಾರ್ಥಕವಾಗಿ ನೋಡಿದರೆ ಹೊಸದನ್ನು ಕಲಿಯಲು ಅವಕಾಶ ಸಿಗುತ್ತದೆ ಎಂದು ಕಿವಿ ಮಾತು ಹೇಳಿದರು.

ಚಂದ್ರಯಾನ-3ರ ಯಶಸ್ಸು ವಿದ್ಯಾರ್ಥಿ ಗಳಿಗೆ ಸ್ಫೂರ್ತಿ ನೀಡಬಹುದು. ಏಕೆಂದರೆ ವಿಜ್ಞಾನಿಗಳ ತಂಡವು ಚಂದ್ರಯಾನ-2 ರಲ್ಲಿ ವೈಫಲ್ಯವನ್ನು ಕಂಡರೂ ಮತ್ತೆ ತಮ್ಮ ಗುರಿಯನ್ನು ಬೆನ್ನಟ್ಟಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ ಚಂದ್ರಯಾನ-3 ಮಿಷನ್ ಯಶಸ್ವಿಯಾಗಲು ಸಹಕಾರಿಯಾಯಿತು ಎಂದು ವಿಜ್ಞಾನಿ ವಿವರಿಸಿದರು.

ಗ್ರಾಮೀಣ ಭಾಗಗಳಲ್ಲಿಯೂ ಅತ್ಯುತ್ತಮ ಪ್ರತಿಭೆಯುಳ್ಳ ವಿದ್ಯಾರ್ಥಿಗಳಿದ್ದು, ಅವರನ್ನು ಗುರುತಿಸುವ ಕೆಲಸವಾದಾಗ ದೇಶಕ್ಕೆ ಇನ್ನೂ ಅನೇಕ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡಬಹುದು ಎಂದು ತಿಳಿಸಿದರು. 

ವಿಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಇಸ್ರೋದಲ್ಲಿಯೂ ಕೆಲಸ ಮಾಡಬಹುದು. ಇಲ್ಲವೇ ಇಸ್ರೋಗೆ ಅವಶ್ಯವಿರುವ ವಸ್ತುಗಳನ್ನು ಹಲವಾರು ಕಂಪನಿಗಳು ತಯಾರು ಮಾಡಿಕೊಡುತ್ತಿದ್ದು, ಅಂತಹ ಕಂಪನಿಗಳಲ್ಲಿಯೂ ಕೆಲಸ ಗಿಟ್ಟಿಸಿ ಕೊಂಡು ಇಸ್ರೋದ ಮುಂದಿನ ಯೋಜನೆಗಳಿಗೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಬಹುದು ಎಂದು ಮಾಹಿತಿ ನೀಡಿದರು.

ಚಂದ್ರಯಾನ-3ರ ಮಿಷನ್‍ನ ಕಾರ್ಯಾಚರಣೆಯ ಸವಾಲುಗಳು ಮತ್ತು ದೇಶಕ್ಕಾಗುವ ಉಪಯೋಗಗಳ ಬಗ್ಗೆ, ಆದಿತ್ಯ ಎಲ್-1, ಚಂದ್ರನ ಮೇಲ್ಮೈ ಮತ್ತು ವಿಜ್ಞಾನಿಯಾಗಲು ಅವಶ್ಯವಿರುವ ವಿದ್ಯಾಭ್ಯಾಸದ ಕುರಿತಂತೆ ವಿದ್ಯಾರ್ಥಿಗಳು ವಿಜ್ಞಾನಿ ದಾರುಕೇಶ್ ಅವರೊಂದಿಗೆ ಸಂವಾದಿಸಿದರು.

ಬಿಇಒ ನಂಜರಾಜ್ ಮಾತನಾಡಿ, ಇಸ್ರೋ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಅವರು ವಿಜಯನಗರ ಜಿಲ್ಲೆಯ ಕೊಟ್ಟೂರಿನವರಾಗಿದ್ದು, ಚಂದ್ರಯಾನ-3ರ ತಂಡದಲ್ಲಿ ಕೆಲಸ ಮಾಡಿ ನಮ್ಮ ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ಈ ಸಂದರ್ಭದಲ್ಲಿ ಬಿಆರ್‍ಸಿ ತಿಪ್ಪೇಶಪ್ಪ, ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ, ಖಜಾಂಚಿ ಡಿ.ಜಿ. ಸೋಮಪ್ಪ, ಟ್ರಸ್ಟಿಗಳಾದ ಡಿ.ಎಸ್. ಅರುಣ್, ವಾಣಿ ಸುರೇಂದ್ರಗೌಡ, ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಎಚ್.ಎಂ. ದರ್ಶನ್, ಶಿಕ್ಷಣ ಸಂಯೋಜಕ ಎ.ಜಿ. ಹರೀಶ್ ಕುಮಾರ್, ಡಿ.ಎಸ್. ಪ್ರದೀಪ್ ಗೌಡ ಮತ್ತು ಇತರರು ಉಪಸ್ಥಿತರಿದ್ದರು.

ಪಿಯು ಕಾಲೇಜಿನ ಉಪನ್ಯಾಸಕರಾದ ದಿವ್ಯಾ ನಿರೂಪಿಸಿ, ಉಪನ್ಯಾಸಕ ಸಂತೋಷ್ ಸ್ವಾಗತಿಸಿ, ಮಹೇಶ್ ವಂದಿಸಿದರು.

error: Content is protected !!