ಹರಪನಹಳ್ಳಿ, ನ.10- ತಾಲ್ಲೂಕಿನ ಜಂಬುಲಿಂಗನಹಳ್ಳಿ ಗ್ರಾಮದ ಮಾರ್ಗವಾಗಿ ಹಾದು ಹೋಗಿರುವ ಹರಪನಹಳ್ಳಿ-ದಾವಣಗೆರೆ ಸಿಸಿ ರಸ್ತೆಯು ಅತ್ಯಂತ ಕಳಪೆಯಿಂದ ಕೂಡಿದ್ದು, ದೂಳಿನಿಂದ ಕಿರಿ ಕಿರಿಯಾಗಿ ತುಂಬಾ ಸಮಸ್ಯೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
ಈ ರಸ್ತೆ ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ 6 ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿತ್ತು. ಅಷ್ಟರಲ್ಲೇ ಆದ ಗುಂಡಿಗಳನ್ನು ಮುಚ್ಚಿ ಸರಿಮಾಡಲಾಗಿತ್ತು. ಈಗ ಈ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ಧೂಳಿನಿಂದ ಕೂಡಿದೆ ಎಂದು ಗ್ರಾಮಸ್ಥರು ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದರು.
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ಇಂಜಿನಿಯರ್ ಪ್ರಕಾಶ್ ಪಟೇಲ್, ಮುಂದಿನ 15 ದಿನಗಳ ಒಳಗೆ ಹಾಳಾದ ರಸ್ತೆಯನ್ನು ದುರಸ್ತಿ ಮಾಡಿಸಿ ಕೊಡುತ್ತೇನೆ. ಧೂಳು ಆಗದಂತೆ ಟ್ಯಾಂಕರ್ ನೀರು ಸಿಂಪಡಿಸುವುದಾಗಿ ತಿಳಿಸಿದರು. ಆಗ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದರು.
ಈ ಸಂದರ್ಭದಲ್ಲಿ ಪಿಎಸ್ಐ ಎ.ಕಿರಣ್ಕುಮಾರ್, ಇಂಜಿನಿಯರ್ ಮಹೇಶ್ ನಾಯ್ಕ್ ಹಾಜರಿದ್ದರು. ಗ್ರಾಮ ಪಂಚಾಯತಿ ಸದಸ್ಯ ಸುರೇಶ್, ಮಂಜುನಾಥ್, ಕುಬೇರಪ್ಪ, ನಾಗರಾಜ್, ಅಡಿವೆಪ್ಪ, ಹೆಚ್. ನಾಗಪ್ಪ, ಕುಮಾರಪ್ಪ, ರಾಜಪ್ಪ, ಮಲ್ಲೇಶಪ್ಪ, ಬಿ. ಸಿದ್ದಪ್ಪ, ಪಿ.ಜಿ. ಪ್ರಕಾಶ್, ಆರ್, ಬಸವರಾಜ್, ಜಿ. ಸಿದ್ದಪ್ಪ, ವೈ. ರಾಜಪ್ಪ, ಅಂಗಡಿ ರವಿ, ರಾಜಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.