‘ನಮ್ಮ ನೀರು ನಮ್ಮ ಹಕ್ಕು’, ‘ಬೇಕೇ ಬೇಕು, ನೀರು ಬೇಕು’

‘ನಮ್ಮ ನೀರು ನಮ್ಮ ಹಕ್ಕು’, ‘ಬೇಕೇ ಬೇಕು, ನೀರು ಬೇಕು’

ಭದ್ರಾ ನಾಲೆ ನೀರು ಸ್ಥಗಿತದ ತೀರ್ಮಾನ ವಿರೋಧಿಸಿ ಹೆದ್ದಾರಿ ತಡೆ ನಡೆಸಿ ರೈತರ ಪ್ರತಿಭಟನೆ

ದಾವಣಗೆರೆ, ಸೆ.17- ‘ನಮ್ಮ ನೀರು ನಮ್ಮ ಹಕ್ಕು’, ‘ಬೇಕೇ ಬೇಕು, ನೀರು ಬೇಕು’ ಎಂದು ರೈತರು ಘೋಷಣೆ ಕೂಗಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನೀರು ಬಿಡುವ ಆದೇಶದ ಪ್ರತಿ ಕೈ ಸೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಭದ್ರಾ ಬಲದಂಡೆ ನಾಲೆಗಳಿಗೆ ನೀರು ಸ್ಥಗಿತಗೊಳಿಸುವ ತೀರ್ಮಾನ ವಿರೋಧಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವ ದಲ್ಲಿ ನೂರಾರು ರೈತರು ಭಾನುವಾರ ಪ್ರತಿಭಟನೆ ನಡೆಸಿದರು.

ಆರಂಭದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ನಂತರ ಬಳಿಕ ಹೆದ್ದಾರಿಗೆ ಬಂದು ವಾಹನಗಳನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯ ಪಾಲಕ ಎಂಜಿನಿಯರ್ ಆರ್. ಬಿ. ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ಇನ್ನೆರಡು ದಿನಗಳಲ್ಲಿ ಆದೇಶದ ಪ್ರತಿ ಬರಲಿದೆ ಎಂದು ಭರವಸೆ ನೀಡಿದರು. ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಸುಜಾತ ಅವರಿಗೆ, ರೈತ ಮುಖಂಡರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. 

ಭದ್ರಾ ಬಲದಂಡೆ ನಾಲೆಗಳಿಗೆ ನೀರು ಹರಿಸುವುದನ್ನು ಮುಂದುವರೆಸಲಾಗಿದೆ. ರಜೆ ಇರುವುದರಿಂದ ಆದೇಶದ ಪ್ರತಿ ಎರಡು ದಿನ ವಿಳಂಬವಾಗಬಹುದು ಎಂದು ಸುಜಾತ ಅವರು ಹೇಳಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದರು.

 ಆದೇಶದ ಪ್ರತಿ ಕಳುಹಿಸುವಂತೆ ಒತ್ತಾಯಿಸಿದ ರೈತರು,  ಸೋಮವಾರ ಆದೇಶದ ಪ್ರತಿ ಕೈಸೇರದಿದ್ದರೆ, ಮಂಗಳವಾರ ದಿಂದ ಹೆದ್ದಾರಿ ತಡೆ ಮಾಡಲಾಗುವುದು ಎಂದೂ ಎಚ್ಚರಿಸಿದರು.

ಶೇ.75ರಷ್ಟು ಭಾಗ ನೀರಾವರಿ ದಾವಣಗೆರೆಯಲ್ಲಿಯೇ ಇದ್ದು, ಭದ್ರಾವತಿ ಭಾಗದಲ್ಲಿ 10 ಸಾವಿರ ಹೆಕ್ಟೇರ್ ಮಾತ್ರ ಇದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರೈತರ ಅನ್ನ ಕಿತ್ತುಕೊಂಡಿದ್ದಾರೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್.ಲಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿಯೇ ಕಾಡಾ ಕಚೇರಿ ಆಗಬೇಕು. ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರೇ ಕಾಡಾದ ಮೇಲುಸ್ತುವಾರಿ ನೋಡಿ ಕೊಳ್ಳಬೇಕು ಎಂದು  ನೀರಾವರಿ ತಜ್ಞ  ಎಚ್‌.ನರಸಿಂಹಪ್ಪ ಆಗ್ರಹಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ನಾಗೇಶ್ವರರಾವ್ ಮಾತನಾಡಿ, 100 ದಿವಸ ನೀರು ಹರಿಸುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ನೀರಿನ ಮೇಲೆ ದರ್ಪ ಮಾಡಿದವರು ಯಾರೂ ಉಳಿದಿಲ್ಲ. ನಾನು ಈಗ ಅಂಗಿ ಬಿಚ್ಚಿದ್ದೇನೆ. ನೀರು ಹರಿಸುವವರೆಗೂ ಶರ್ಟ್ ಧರಿಸುವುದಿಲ್ಲ ಎಂದು ಎಚ್ಚರಿಸಿದರು.

ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್  ಮಾತನಾಡಿ, ನಾಲೆಯಲ್ಲಿ ನೀರು ನಿಲುಗಡೆ ಮಾಡಿದರೆ ರೈತರಿಗಷ್ಟೇ ಅಲ್ಲ, ಸರ್ಕಾರಕ್ಕೂ ಕೋಟಿಗಟ್ಟಲೆ ನಷ್ಟವಾಗುತ್ತದೆ. ಆದ್ದರಿಂದ ನೀರು ನಿಲುಗಡೆ ತೀರ್ಮಾನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

  ಮಾಜಿ ಮೇಯರ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ, ಮತ್ತಿ ಮಂಜುನಾಥ, ಕುಂದುವಾಡದ ಎ. ಪ್ರಕಾಶ್, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಹೊಸಹಳ್ಳಿ ನಾಗರಾಜ್, ನಾಗರಸನಹಳ್ಳಿ ಬಾಬಜ್ಜಿ, ಆರನೇಕಲ್ಲು ವಿಜಯಕುಮಾರ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!