ಹರಿಹರ, ಸೆ. 15 – ಇಲ್ಲಿನ ಡಿಆರ್ಎಂ ಸರ್ಕಾರಿ ಪ್ರೌಢಶಾಲೆಗೆ ಗುರುವಾರದಂದು ಭೇಟಿ ನೀಡಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿಯವರ ಕೋರಿಕೆ ಮೇರೆಗೆ ಶಾಲೆಗೆ ಭೇಟಿ ನೀಡಿದ್ದ ತಹಶೀಲ್ದಾರರು, ಶಾಲಾ ಆವರಣದಲ್ಲಿರುವ ಪಾಳು ಬಿದ್ದಿರುವ ಹಳೆ ಕಟ್ಟಡದ ಕೊಠಡಿಗಳಲ್ಲಿ ಅಪಾರ ಪ್ರಮಾಣದ ಬಳಸಿ ಬಿಸಾಡಿದ್ದ ಚುಚ್ಚುಮದ್ದು ನೀಡುವ ಸಿರಿಂಜ್ ಹಾಗೂ ಇತರೆ ತ್ಯಾಜ್ಯವನ್ನು ಗಮನಿಸಿದರು.
ಇಲ್ಲಿ ಸಿರಿಂಜ್ಗಳು ಇಷ್ಟೊಂದು ಬಿದ್ದಿರುವುದನ್ನು ಗಮನಿಸಿದರೆ, ಯುವಕರು ಮಾದಕ ದ್ರವ್ಯ ಬಳಕೆ ಮಾಡುತ್ತಿರುವ ಅನುಮಾನ ಬರುತ್ತದೆ, ಜೊತೆಗೆ ಮಲ, ಮೂತ್ರವನ್ನು ಇಲ್ಲಿ ಮಾಡಲಾಗಿದೆ, ಶಾಲಾ ಆವರಣ ಹೀಗಾದರೆ ಹೇಗೆಂದು ಅವರು ಬೇಸರ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಬಿವುಲ್ಲಾ ಮಾತನಾಡಿ, ಈಗಾಗಲೇ ಪಾಳುಬಿದ್ದ ಹಳೆ ಕಟ್ಟಡದ ತೆರವಿಗೆ ಪಿಡಬ್ಲ್ಯುಡಿ ಇಲಾಖೆ ಹಾಗೂ ನಗರಸಭೆಯಿಂದ ಪರವಾನಿಗೆ ಪಡೆಯಲಾಗಿದೆ. ಈ ಕುರಿತು ಅಗತ್ಯ ದಾಖಲೆಗಳನ್ನು ಬಿಇಒ, ಡಿಡಿಪಿಐ ಕಚೇರಿಗೆ ಕಳಿಸಿ ಹಲವು ತಿಂಗಳಾಗಿವೆ. ಆದರೂ ಕೂಡ ಈವರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಟ್ಟಡ ತೆರವಿಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ತಹಶೀಲ್ದಾರ್ ಗಮನ ಸೆಳೆದರು.
ಶಾಲಾ ಆವರಣದಲ್ಲಿ ಅನ್ಯರು ಪ್ರವೇಶಿಸದಂತೆ ಪೊಲೀಸ್ ಬೀಟ್ ಆಯೋಜಿಸಲು, ಹಳೆ ಕಟ್ಟಡವನ್ನು ತೆರವುಗೊಳಿಸುವ ಕುರಿತು ಡಿಸಿ, ಸಿಇಒ, ಎಸ್ಪಿ, ಡಿಡಿಪಿಐ, ಬಿಇಒ ರವರಿಗೆ ಪತ್ರ ಬರೆದು ಕೋರುತ್ತೇನೆ ಎಂದು ತಹಶೀಲ್ದಾರ್ ಭರವಸೆ ನೀಡಿದರು,
ನಗರ ಠಾಣೆ ಪಿಎಸ್ಐ ಚಿದಾನಂದಪ್ಪ, ಗ್ರಾಮ ಲೆಕ್ಕಾಧಿಕಾರಿ ಎಚ್.ಜಿ.ಹೇಮಂತ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.