ಬಾಕಿ ವೇತನಕ್ಕೆ ಆಗ್ರಹ
ಮಲೇಬೆನ್ನೂರು, ಸೆ. 15- ಇಲ್ಲಿನ ಭದ್ರಾ ನಾಲಾ ನಂ. 3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಬಾಕಿ ವೇತನಕ್ಕೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹೊರ ಗುತ್ತಿಗೆ ನೌಕರರು (ಸೌಡಿಗಳು) ಶುಕ್ರವಾರ ನೀರಾವರಿ ಕಚೇರಿಗಳಿಗೆ ಬೀಗ ಹಾಕಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧಿಕ್ಕಾರ ಕೂಗಿದರು.
ಕಳೆದ 5-6 ತಿಂಗಳಿನಿಂದ ವೇತನ ನೀಡದೇ ನಮ್ಮನ್ನು ಸಾಯುಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ನೌಕರರು ವೇತನ ನೀಡುವವರಿಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ನಮ್ಮ ಬಾಕಿ ವೇತನ ಸಮಸ್ಯೆ ಬಗೆಹರಿಸುವ ಬಗ್ಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಎ.ಕೆ. ಆಂಜನೇಯ ದೂರಿದರು.
ಅಚ್ಚುಕಟ್ಟಿನ ರೈತರೂ ಕೂಡ ನೌಕರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ಸೌಡಿಗಳು ಕೆಲಸಕ್ಕೆ ಬಾರದಿದ್ದರಿಂದ ಕಾಲುವೆಗಳಲ್ಲಿ ನೀರಿನ ನಿರ್ವಹಣೆ ಇಲ್ಲದೆ ನೀರು ಕೊನೆ ಭಾಗಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಲೇಬೆನ್ನೂರು, ಬಸವಾಪಟ್ಟಣ ಮತ್ತು ಸಾಸ್ವೆಹಳ್ಳಿ ಉಪವಿಭಾಗಗಳ ನೂರಾರು ನೌಕರರು ಪ್ರತಿಭಟನೆಯಲ್ಲಿದ್ದರು.
ಏತನ್ಮಧ್ಯೆ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ನೀರಾವರಿ ನಿಗಮದ ಎಂ.ಡಿ. ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ದಿನಗೂಲಿ ನೌಕರರ ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ.