ಬ್ಯಾಂಕಿನವರ ಅಸಹಕಾರ ನೀತಿಯೇ ದುರಂತಕ್ಕೆ ಕಾರಣ : ರವೀಂದ್ರಗೌಡ ಪಾಟೀಲ
ರಾಣೇಬೆನ್ನೂರು, ಸೆ.14- ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಷ್ಟೂರು ಮತ್ತು ಹೊಸ ಹೂಲಿಹಳ್ಳಿಯಲ್ಲಿ ನಡೆದಿದೆ.
ಯೂನಿಯನ್ ಬ್ಯಾಂಕಿನ ಕೃಷಿ ಸಾಲ ತೀರಿಸಲಾಗದೇ, ಬ್ಯಾಂಕಿನವರ ಎಡಬಿಡಂಗಿ ನೀತಿಯಿಂದ ಬೇಸತ್ತ ಮುಷ್ಠೂರು ಗ್ರಾಮದ ರೈತ ಜಗದೀಶ ಶಿದ್ದಪ್ಪ ಜಾನಪ್ಪನವರ (40) ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ತುರ್ತು ಚಿಕಿತ್ಸೆಗಾಗಿ ದಾವಣಗೆರೆ ಸಿ.ಜಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತೊಬ್ಬ ರೈತ ತಾಲ್ಲೂಕಿನ ಹೊಸಹೂಲಿಹಳ್ಳಿ ಗ್ರಾಮದ ರಾಮಪ್ಪ ಹುಚ್ಚಮ್ಮನವರ (50) ಸಾವನ್ನಪ್ಪಿದ್ದಾನೆ.
ಗ್ರಾಮದ ಜಗದೀಶ ಶಿ. ಜಾನಪ್ಪನವರ 5 ಎಕರೆ ಜಮೀನು ಹೊಂದಿದ್ದು, ಯೂನಿಯನ್ ಬ್ಯಾಂಕಿನಲ್ಲಿ ಈ 10 ವರ್ಷಗಳ ಹಿಂದೆ ಕೃಷಿ ಸಾಲ ಮಾಡಿದ್ದು, ಬ್ಯಾಂಕಿನವರ ಎಡಬಿಡಂಗಿತನದಿಂದ ಆ ಸಾಲ ಸಾಲಮನ್ನಾ ಯೋಜನೆಗೂ ಬಾರದೆ ರೈತ ಹತಾಶೆಯನಾಗಿದ್ದ. ಅಲ್ಪ ಪ್ರಮಾಣದ ಸಾಲ, ಬಡ್ಡಿ+ ಚಕ್ರಬಡ್ಡಿ ಎಂದು ಹೆಮ್ಮರವಾಗಿ ಬೆಳೆದಿರುವುದೇ ರೈತನ ಈ ದುರಂತಕ್ಕೆ ಕಾರಣ ವಾಗಿದೆ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಅತಿವೃಷ್ಟಿಯಾದರೆ ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ರೈತಾಪಿ ವರ್ಗ ದಿಕ್ಕೇ ತೋಚದಂತಾಗಿದೆ. ಸರ್ಕಾರ ಕೂಡಲೇ ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಸಾಲ ಮನ್ನಾ ಮಾಡಿದರೆ ಮಾತ್ರ ಇಂಥ ಪ್ರಕರಣಗಳನ್ನು ಶಾಶ್ವತವಾಗಿ ತಡೆಹಿಡಿಯಬಹುದು ಎಂದಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸಿದ ರೈತ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದು, ಈತನಿಗೆ ಎರಡು ಸಣ್ಣ ಮಕ್ಕಳು, ಪತ್ನಿ ಮತ್ತು ತಾಯಿ ಇದ್ದಾರೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.