ದತ್ತಿ ಕಾರ್ಯಕ್ರಮ, ಶ್ರಾವಣ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಸಿ.ವಿ.ತಿರುಮಲರಾವ್
ಚನ್ನಗಿರಿ, ಸೆ. 1 – ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರಾವಣ ಮಾಸದ ಅಂಗವಾಗಿ ಕವಿ ಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲ್ಯಾಘನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಶ್ರಾಂತ ಜಂಟಿ ನಿರ್ದೇಶಕ ಸಿ.ವಿ.ತಿರುಮಲರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಶುಕ್ರವಾರ ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ದತ್ತಿ ಕಾರ್ಯಕ್ರಮ ಹಾಗೂ ಶ್ರಾವಣ ಕವಿ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಉದಯೋನ್ಮುಖ ಕವಿಗಳನ್ನು ಬಳಸಿಕೊಳ್ಳುವುದರ ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳಿಂದ ನಾಡಿನ ಪ್ರಸಿದ್ದ ಕವಿಗಳ ಕವನ ವಾಚನ ಮಾಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್, ಕಾವ್ಯಗಳು ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಪ್ರಜ್ಞೆಗಳನ್ನು ಹೊಂದಬೇಕು ಎಂದರು.
ಕವಿಗಳಾದ ನಾಗೇಶನಾಯ್ಕ್, ಎಂ.ಅಣ್ಣೋಜಿರಾವ್ ಪವಾರ್, ಹಟ್ಟಿ ಮಂಜುನಾಥ್, ಕಶ್ಯಪ್ ಚನ್ನಗಿರಿ, ಎಂ.ಆರ್. ಲೋಕೇಶ್ವರಯ್ಯ ಸ್ವರಚಿತ ಕವಿತೆಗಳನ್ನು ಹಾಡಿದರು. ಕಲಾವಿದರಾದ ಸಿದ್ದೇಶ್ ಹಿರೇಮಠ ಕನ್ನಡ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಯು.ಚನ್ನಬಸಪ್ಪ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಿ.ಚಿನ್ನಸ್ವಾಮಿ, ಕಸಾಪ ಪದಾಧಿಕಾರಿಗಳಾದ ಎಂ.ಎಸ್.ಬಸವನಗೌಡ, ಬಿ.ಈ.ಸಿದ್ದಪ್ಪ, ಮಾದೇನಹಳ್ಳಿ ಓಂಕಾರಮೂರ್ತಿ ಮತ್ತಿತರರು ಇದ್ದರು.