ಹರಪನಹಳ್ಳಿ, ಆ.28- ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ರೈತರಿಗೆ ರಾತ್ರಿ ಬದಲು ಹಗಲಿನಲ್ಲಿ ತ್ರಿಫೇಸ್ ಕರೆಂಟನ್ನು ನೀಡಬೇಕೆಂದು ಆಗ್ರಹಿಸಿ, ತಾಲ್ಲೂಕಿನ ಶೃಂಗಾರತೋಟ ಗ್ರಾಮದ ರೈತರು ಸೋಮವಾರ ಹರಪನಹಳ್ಳಿ ಬೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಶೃಂಗಾರತೋಟದ ಗ್ರಾಮದಲ್ಲಿನ ರೈತರ ಜಮೀನುಗಳು ಹೆಚ್ಚಾಗಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕಾರಣ ರೈತರು ರಾತ್ರಿ ಸಮಯದಲ್ಲಿ ಜಮೀನಿಗೆ ನೀರು ಹಾಯಿಸಲು ಹೋದಾಗ ಚಿರತೆ, ಕರಡಿ, ಕಾಡು ಹಂದಿಗಳ ಕಾಟ ಹೆಚ್ಚಾಗಿರುವ ಪರಿಣಾಮ ರೈತರು ಆತಂಕ ಪಡಬೇಕಾಗಿದೆ. ಹಾಗಾಗಿ ರಾತ್ರಿ ಬದಲು ಹಗಲಿನಲ್ಲಿ ರೈತರ ಪಂಪ್‍ಸೆಟ್‍ಗೆ ವಿದ್ಯುತ್ ಸರಬರಾಜು ಮಾಡಬೇಕೆಂದು ರೈತರು ಒತ್ತಾಯಿಸಿದರು.
ಈಗಾಗಲೇ ಕಾಡು ಪ್ರಾಣಿಗಳಿಂದ ಹಲವು ರೈತರ ಮೆಕ್ಕೆಜೋಳದ ಬೆಳೆ ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ರೈತ ಬೇಸತ್ತು ಹೋಗಿದ್ದಾನೆ. ಮೊದಲೇ ಮಳೆಯ ಕೊರತೆಯಿಂದಾಗಿ ರೈತ ಆಕಾಶ ನೋಡುವಂತಾಗಿದೆ. ಇದ್ದ ಬೆಳೆಯನ್ನು ಉಳಿಸಿಕೊಳ್ಳಲು ರೈತ ಹರಸಹಾಸಪಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತನಿಗೆ ಕರೆಂಟ್‍ನ ಸಮಸ್ಯೆ ಕಾಡುತ್ತಿದ್ದು, ಇದರಿಂದ ದಿಕ್ಕು ತೋಚದಂತಾಗಿದೆ ಎಂದು ಅಳಲು ತೊಡಿಕೊಂಡರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವರಾಜ್, ಮುಖಂಡರಾದ ಮಂಜುನಾಥ್, ವೈ.ಪ್ರಶಾಂತ್, ಇಮ್ರಾನ್, ಪ್ರವೀಣ್, ಇಮಾಂ, ತಿಮ್ಮಪ್ಪ, ಬಡೇ ಸಾಬ್, ರಾಜಾ ಸಾಬ್, ಯೂನುಸ್, ತಿರುಪತಿ ಸೇರಿದಂತೆ ಇತರರು ಇದ್ದರು.