ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ

ದಾವಣಗೆರೆ, ಜೂ. 6- ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ್ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾಯ್ದೆ ರೂಪಿಸಿ, ಲಕ್ಷಾಂತರ ಬಡ ಗೇಣಿದಾರರಿಗೆ ಭೂಮಿ ನೀಡಿದ ಧ್ರುವತಾರೆ ಅರಸ್ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಬಣ್ಣಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ 41 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಸಮ ಸಮಾಜವನ್ನು ಕಟ್ಟಲು ಹಗಲಿರಲು ಶ್ರಮಿಸಿದರು. ತಲೆ ಮೇಲೆ ಮಲ ಹೋರುವ ಅನಿಷ್ಟ ಪದ್ದತಿಯನ್ನು ಹಾಗೂ ಜೀತ ಪದ್ದತಿಯನ್ನು ಪ್ರಬಲ ಕಾನೂನು ಮಾಡುವ ಮೂಲಕ ರದ್ದುಗೊಳಿಸಿದರು. ಭೂ ಸುಧಾರಣೆ ಕಾಯ್ದೆ ರೂಪಿಸಿ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಕ ಕಾನೂನಿನ ಮೂಲಕ ಲಕ್ಷಾಂತರ ಬಡ ಗೇಣಿದಾರರಿಗೆ ಭೂಮಿ ದೊರೆಯುವಂತೆ ಮಾಡಿದರು ಎಂದು ಅರಸು ಅವರ ಸಾಧನೆಗಳನ್ನು ತಿಳಿಸಿದರು.

 ದಲಿತರು, ಬಡವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರಿಗೆ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ನೀಡಿ ದುರ್ಬಲರಿಗೆ ಸಾಮಾಜಿಕ ನ್ಯಾಯ ಒದಗಿಸಿದರು ಎಂದು ಅರಸುರವರನ್ನು ಸ್ಮರಿಸಿದರು.

ದೇವರಾಜ ಅರಸು ಅವರು ಅನುಸರಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆ ದೇಶದಲ್ಲಿಯೇ ಅನನ್ಯವಾದದ್ದು, ಶತ ಶತಮಾನಗಳ ಕಾಲದಿಂದ ಶೋಷಣೆಗೆ ಒಳಗಾಗಿದ್ದ ಜನ ಸಮುದಾಯ ಗಳನ್ನು ಗುರುತಿಸಿ, ಅವರಿಗೆ ಆಡಳಿತದಲ್ಲಿ ಪಾಲು ಪಡೆಯುವಂತೆ ಕಲ್ಪಿಸಿದ ವಿಶೇಷ ಅವಕಾಶಗಳು ದೇವರಾಜ್ ಅರಸರನ್ನು ಒಬ್ಬ ದಾರ್ಶನಿಕ ಮುತ್ಸದ್ದಿಯನ್ನಾಗಿಸಿತು ಎಂದರು.

ಮೈಸೂರು ಎಂದಿದ್ದ ರಾಜ್ಯದ ಹೆಸರನ್ನು ಕರ್ನಾಟಕವೆಂದು ಅಧಿಕೃತವಾಗಿ ಘೋಷಿಸಿದ್ದು, ಕನ್ನಡವನ್ನು ಆಡಳಿತ ಭಾಷೆಯಾಗಿ ಅಂಗೀಕರಿ ಸಿದ್ದು ದೇವರಾಜ ಅರಸು ರವರ ಗಟ್ಟಿತನವನ್ನು ತೋರಿಸುತ್ತದೆ ಎಂದು ಅವರು ಶ್ಲ್ಯಾಘಿಸಿದರು.

error: Content is protected !!