ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ದಾವಣಗೆರೆ, ಜೂ. 6- ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆಶಾ ಕಾರ್ಯಕರ್ತೆಯರಿಗೆ ಕಳೆದ ಕೆಲ ದಿನಗಳಿಂದ ಮೊಬೈಲ್‌ನಲ್ಲಿ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆಗಳ ಇ-ಸಮೀಕ್ಷೆ ಮಾಡಲು ತರಬೇತಿ ನೀಡಿ, ಮೊಬೈಲ್ ಆಪ್ ಮೂಲಕ ಸಮೀಕ್ಷೆ ಮಾಡಬೇಕೆಂದು ತಿಳಿಸಲಾಗಿದೆ.  ಆದರೆ ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆ ಅಸಾಧ್ಯವಾಗಿದೆ. ಅದಕ್ಕೆ ಅನೇಕ ತೊಂದರೆಗಳೂ ಸಹ ಇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬಹುತೇಕ ಆಶಾ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್ ಇಲ್ಲ. ಹೊಸ ಆಪ್ ಸಪೋರ್ಟ್ ಮಾಡುತ್ತಿಲ್ಲ. ಈಗಾಗಲೇ ಸಿಯುಜಿ ಸಿಮ್ ನೆಟ್‌ವರ್ಕ್ ಸಿಗುತ್ತಿಲ್ಲ. ಇಂಗ್ಲಿಷ್ ಟೈಪ್ ಕೆಲವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿಗಳೊಂದಿಗೆ ಸೇರಿ ಸರ್ವೆ ಮಾಡಲು ವ್ಯವಸ್ಥೆ ಮಾಡಬೇಕು. ಆಶಾ ಕಾರ್ಯಕರ್ತೆಯರಲ್ಲಿ ಯಾರಿಗೆ ಸರ್ವೆ ಮಾಡಲು ಸಾಧ್ಯವೋ ಅವರಿಗೆ ಮೊಬೈಲ್ ನೆಟ್‌ವರ್ಕ್ ನೀಡಿ ಸರ್ವೆ ಮಾಡಿಸಿ, ಯಾರಿಗೆ ಮೊಬೈಲ್ ಬಳಸಲು ಆಗುವುದಿಲ್ಲವೋ ಅಂತವರಿಗೆ ಪರ್ಯಾಯ ವ್ಯವಸ್ಥೆ ಮಾಡಿ, ಸೂಕ್ತ ಸಂಭಾವನೆ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಲಲಿತಮ್ಮ ನರಗನಹಳ್ಳಿ, ತಿಪ್ಪಮ್ಮ ನೀರ್ಥಡಿ, ಅನಿತಾ ಶಿವಪುರ, ಮಂಜುಳಾ ಆನಗೋಡು, ಶಶಿಕಲಾ ಹೂವಿನಮಡು, ಆಶಾ ಪಾಂಡೋಮಟ್ಟಿ, ದೇವಮ್ಮ ಮತ್ತಿತರರು ಭಾಗವಹಿಸಿದ್ದರು. 

error: Content is protected !!