ಜಗಳೂರು : ಕೆರೆಗಳ ಒತ್ತುವರಿ ತೆರವುಗೊಳಿಸಿ

ಜಗಳೂರು : ಕೆರೆಗಳ ಒತ್ತುವರಿ ತೆರವುಗೊಳಿಸಿ

ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚನೆ

ಜಗಳೂರು, ಜೂ. 3- ತಾಲ್ಲೂಕಿನಲ್ಲಿ ಕೆರೆ ಗಳನ್ನು ಒತ್ತುವರಿ ಮಾಡಿ ಮನೆ, ಕಟ್ಟಡಗಳನ್ನು ನಿರ್ಮಿಸಿ ಕೊಂಡಿರುವುದನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಅವರು ಮಾತನಾಡಿದರು.

ತಾಲ್ಲೂಕಿನ ಪ್ರತಿ ಕೆರೆಗಳ ಪಟ್ಟಿ ತಯಾರಿ ಸಬೇಕು. ಮಳೆಗಾಲದಲ್ಲಿ ನೀರು ಭರ್ತಿಯಾದ ವೇಳೆ ಹಿನ್ನೀರು ಮನೆಗಳಿಗೆ ನುಗ್ಗದಂತೆ ಟ್ರಂಚ್ ಹಾಕಿಸಬೇಕು. ಒಂದು ವೇಳೆ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡಿದ್ದಲ್ಲಿ ಅವರನ್ನು ಸ್ಥಳಾಂತರಿಸಿ, ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಖರೀದಿಸಿ ಶಾಶ್ವತ ನಿವೇಶನ, ಸೂರು ಕಲ್ಪಿಸಿ ಎಂದು  ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಚರಂಡಿ ಸ್ವಚ್ಛತೆ ಗೊಳಿಸಬೇಕು. ಮಳೆಗಾಲದಲ್ಲಿ ಚರಂಡಿ ನೀರು ಯಾವುದೇ ಮನೆಗಳ ಮುಂಭಾಗ ಸಂಗ್ರಹವಾಗದೆ ಹೊರವಲಯಕ್ಕೆ ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಬೇಕು. ಕೆರೆ ಒತ್ತುವರಿ ಮಾಡಿರುವ ವಸತಿ ಕುಟುಂಬಗಳಿಗೆ ನೊಟೀಸ್ ನೀಡಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ತಾಲ್ಲೂಕಿನ ಅಸಗೋಡು ಕೆರೆ ಪಕ್ಕದಲ್ಲಿ ಮಳೆಗೆ 10 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ತಲಾ 10 ಸಾವಿರ ರೂ. ಪರಿಹಾರ‌ ನೀಡಲಾಗಿದೆ. ಬಿಳಿಚೋಡು ಹಳ್ಳ ಭರ್ತಿಯಾದ ವೇಳೆ ಜನತಾ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಹಿರೇಮಲ್ಲನ ಹೊಳೆ ಗ್ರಾಮದ ಕೆರೆ ಅಂಚಿನಲ್ಲಿ 40‌ ಕುಟುಂಬ ಗಳು ವಾಸವಾಗಿವೆ ಎಂದು ಮಾಹಿತಿ ನೀಡಿದರು.

ಟಾಸ್ಕ್‌ ಫೋರ್ಸ್ ಸಮಿತಿ ರಚಿಸಿ: ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಜನ ಪ್ರತಿನಿಧಿಗಳು, ಎನ್‌ಜಿಓಗಳನ್ನೊಳ ಗೊಂಡ ಟಾಸ್ಕ್ ಫೊರ್ಸ್ ಸಮಿತಿ ರಚಿಸಿ ಪ್ರಕೃತಿ ವಿಕೋಪದ ತುರ್ತು ಸಮಸ್ಯೆಗಳನ್ನು ಪರಿಹರಿಸಬೇಕು. ತಾಲ್ಲೂಕು ಹಂತದ ಸಹಾ ಯವಾಣಿ ಕೇಂದ್ರ ನಿರಂತರಾಗಿ ಚಾಲನೆಯಲ್ಲಿ ರಲಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿ.ಪಂ‌ ಸಿಇಓ ಸುರೇಶ್ ಇಟ್ನಾಳ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳ ರಿಪೇರಿ, ಬೋರ್ ವೆಲ್ ದುರಸ್ತಿ, ಚೆಕ್ ಡ್ಯಾಂ ಗಳನ್ನು ಸ್ವಚ್ಛ ಗೊಳಿಸಬೇಕು. ಸಮರ್ಪಕ ಚರಂಡಿ ವ್ಯವಸ್ಥೆ  ನಿರ್ಮಿಸಿ ಪ್ರಕೃತಿ ವಿಕೋಪಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಪಿಡಿಓ ಗಳಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ‌ ಸಹಾಯಕ‌ ನಿರ್ದೇಶಕ ಬಿ. ಮಹೇಶ್ವರಪ್ಪ ಮಾತನಾಡಿ, ಪಟ್ಟಣದಲ್ಲಿ ಸುಸಜ್ಜಿತ ಹಾಸ್ಟೆಲ್ ಕಟ್ಟಡಗಳಿದ್ದು ವಿದ್ಯಾರ್ಥಿಗಳ ವಸತಿಗೆ ಯಾವುದೇ ತೊಂದರೆಯಿಲ್ಲ‌. ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್ ಸಂತೋಷ್ ಕುಮಾರ್, ತಾ.ಪಂ‌ ಇಓ ಚಂದ್ರ ಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಇದ್ದರು. 

error: Content is protected !!