ಅತ್ಯಾಚಾರಿ ಆರೋಪಿ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹ

ಅತ್ಯಾಚಾರಿ ಆರೋಪಿ ಬ್ರಿಜ್ ಭೂಷಣ್ ಬಂಧನಕ್ಕೆ ಆಗ್ರಹ

ಕುಸ್ತಿಪಟುಗಳ ಹೋರಾಟಕ್ಕೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಬೆಂಬಲ

ದಾವಣಗೆರೆ, ಜೂ.4- ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಮತ್ತು ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಈ ಕೂಡಲೇ ಬಂಧಿಸಿ ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಜಿಲ್ಲಾ ಕ್ರೀಡಾಪಟುಗಳ ಸಂಘ ಒತ್ತಾಯಿಸಿದೆ.

ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದ ಜಿಲ್ಲಾ ಕ್ರೀಡಾಪಟುಗಳ ಸಂಘದ ಪದಾಧಿಕಾರಿಗಳು ಮತ್ತು ಕ್ರೀಡಾಪಟುಗಳು ಬಿಜೆಪಿ ಸಂಸದ ಮತ್ತು ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್‍ರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿದ್ದು, ರಾಷ್ಟ್ರಪತಿಗಳು ಈ ಕೂಡಲೇ ಮಧ್ಯೆ ಪ್ರವೇಶಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮಾತನಾಡಿ, 40ಕ್ಕೂ ಹೆಚ್ಚು ದಿನಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳನ್ನು ಸೌಜನ್ಯಕ್ಕಾದರೂ ಸಹ ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರು ಸಹ ಇದುವರೆಗೂ ಸಮಸ್ಯೆ ಆಲಿಸದೇ ನಿರ್ಲಕ್ಷ್ಯ ವಹಿಸಿದೆ. ಜೊತೆಗೆ ಅತ್ಯಾಚಾರ ಆರೋಪಿ ಬ್ರಿಜ್ ಭೂಷಣ್ ಶರಣ್ ಸಿಂಗ್‍ಗೆ ರಕ್ಷಣೆ ನೀಡುತ್ತಿದೆ ಎಂದು ದೂರಿದರು.

ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಮಾತನಾಡಿ, ಜಾಗತಿಕ ನಾಯಕ ಎಂದು ಹೇಳಿಕೊಳ್ಳುವ ಮೋದಿ ಅವರು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳುಮಾಡಿದ್ದಾರೆ. 176 ದೇಶಗಳ ವಿಶ್ವ ಕುಸ್ತಿ ಒಕ್ಕೂಟ ಭಾರತಕ್ಕೆ ನಿಷೇಧದ ಎಚ್ಚರಿಕೆ ನೀಡಿದ್ದು, ಏಷ್ಯನ್ ಚಾಂಪಿ ಯನ್‍ಶಿಪ್ ಈಗಾಗಲೇ ಭಾರತದಿಂದ ದೂರ ಸರಿದಿದೆ. ಯುನೈಟೆಡ್ ವರ್ಲ್ಡ್‌ ರೆಸ್ಲಿಂಗ್ ಭಾರ ತದ ಕುಸ್ತಿ ಒಕ್ಕೂಟದ ಮೇಲೆ ನಿಷೇಧ ಹೇರಿದರೆ ಒಲಿಂಪಿಯನ್‍ಗಳು ತಟಸ್ಥ ಧ್ವಜದಡಿಯಲ್ಲಿ ಆಡಬೇಕಾಗಲಿದೆ ಎಂದು ಎಚ್ಚರಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕವಿತಾ ಚಂದ್ರಶೇಖರ್ ಮಾತನಾಡಿ, ಮೋದಿಯವರು ‘ಬೇಟಿ ಬಚಾವೋ ಬೇಟಿ ಪಡಾವೋ’ ಮಹಿಳಾ ಸಮಸ್ಯೆಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು. ಸ್ಮೃತಿ ಇರಾನಿ ಅವರು ಸಚಿವರಾಗುವ ಮೊದಲು ಹಣದುಬ್ಬರ, ಮಹಿಳೆಯರ ಸುರಕ್ಷತೆ ಮತ್ತು ನಿರುದ್ಯೋಗದಂತಹ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು, ಮೋದಿ ಸರ್ಕಾರದ ಮತ್ತೊಬ್ಬ ಮಹಿಳಾ ಸಚಿವೆ ಮೀನಾಕ್ಷಿ ಲೇಖಿ ಅವರು ಮೌನವಾಗಿರುವುದನ್ನು ನೋಡಿದರೆ ಅತ್ಯಾಚಾರಿಗಳ ಬೆಂಬಲಕ್ಕೆ ಇಡೀ ಕೇಂದ್ರ ಸರ್ಕಾರವೇ ನಿಂತಿದೆಯಾ? ಎಂದು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮತ್ತು ಕುಸ್ತಿಪಟುಗಳಾದ ಹುಸೇನ್ ಪೈಲ್ವಾನ್, ಗಣೇಶ್ ಮಾತನಾಡಿ, ಸರ್ಕಾರದ ಈ ದಬ್ಬಾಳಿಕೆಗೆ ಬೇಸತ್ತು, ಮಹಿಳಾ ಕುಸ್ತಿಪಟುಗಳು ತಾವು ಗೆದ್ದಿರುವ ಪದಕಗಳನ್ನು ಗಂಗಾನದಿಗೆ ಎಸೆಯಲು ಮುಂದಾಗಿದ್ದಾರೆ. ಇದಕ್ಕಿಂತ ದೊಡ್ಡ ಅಪಮಾನ ಬೇರೆ ಇಲ್ಲ. ಈ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ, ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕ್ರೀಡಾಪಟುಗಳಾದ ಎಲ್.ಎಂ.ಪ್ರಕಾಶ್, ಗೋಪಾಲಕೃಷ್ಣ, ಗೋಪಿ ಅಂತು, ಕ್ರಿಕೆಟ್ ತಿಮ್ಮೇಶ್, ಕುಮಾರ್,  ಶ್ರೀಕಾಂತ್ ಬಗೇರ, ರಾಜು ಭಂಡಾರಿ, ಅಕ್ರಂಬಾಷಾ, ಅಲಿ ರೆಹಮತ್, ರತನ್, ಲೋಕಿಕೆರೆ ಪ್ರದೀಪ್, ಅರುಣ್, ಚೈತನ್ಯ ಕುಮಾರ್, ಲಾಲ್ ಆರೀಫ್, ಹರೀಶ್, ಮೊಟ್ಟೆ ದಾದಾಪೀರ್, ಬಸವರಾಜ ಆವರಗೆರೆ, ಮಧು ಪವಾರ್, ಹನುಮಂತಪ್ಪ, ಸುರೇಶ್ ಜಾಧವ್, ಸೈಯದ್ ಜಿಕ್ರಿಯಾ, ಆರೋಗ್ಯಸ್ವಾಮಿ, ಪ್ರವೀಣ್ ಸೇರಿದಂತೆ, ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.

error: Content is protected !!