ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದು ಜನಶಕ್ತಿ, ಡಿಕೆಶಿ ಯುವಶಕ್ತಿ ಕಾರಣ

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದು ಜನಶಕ್ತಿ, ಡಿಕೆಶಿ ಯುವಶಕ್ತಿ ಕಾರಣ

ಹೊನ್ನಾಳಿ : ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮಲ್ಲಿ ಶಾಸಕ ಡಿ.ಜಿ.ಶಾಂತನಗೌಡ

ಹೊನ್ನಾಳಿ, ಮೇ 28- ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಜನಶಕ್ತಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಯುವಶಕ್ತಿಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಂದ ಅಧಿಕಾರಕ್ಕೆ ಬಂದಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. 

ಅವರು ಭಾನುವಾರ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ  224 ಮತ ಕ್ಷೇತ್ರಗಳಲ್ಲಿ  ಕಾರ್ಯಕರ್ತರಿಗೆ, ಮತ್ತು ಅಭ್ಯರ್ಥಿಗೆ ಆನೆ ಬಲ ತಂದುಕೊಟ್ಟಿದ್ದು,  ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟು ಹಬ್ಬದ ಅಂಗವಾಗಿ ನಡೆದ 75ನೇ ಅಮೃತಮಹೋತ್ಸವ ಸಹ ರಾಜ್ಯದಲ್ಲಿ ಕಾಂಗ್ರೇಸ್‍ನ ಅಭೂತಪೂರ್ವ ಜಯಕ್ಕೆ ಬಹುಪಾಲು ಕಾರಣವಾಗಿದೆ ಎಂದು ಹೇಳಿದರು. 

ಕ್ಷೇತ್ರದ  ಜನತೆ ಪಕ್ಷಾತೀತವಾಗಿ ನೋಟಿನ ಜೊತೆಗೆ ಓಟನ್ನು ನೀಡಿ ನನ್ನನ್ನು ಗೆಲ್ಲಿಸಿದ್ದಾರೆ.  ನನ್ನ ನಿರೀಕ್ಷೆಗೂ ಮೀರಿ ಆರ್ಥಿಕ ಸಹಾಯ ಹಸ್ತ ಚಾಚಿದ್ದು, ನಾನು ಇವರಿಗೆ ಎಷ್ಟು ಋಣಿಯಾಗಿದ್ದರೂ ಸಾಲದು ಎಂದರು.

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಬಗ್ಗೆ ವಿರೋಧ ಪಕ್ಷದವರು ಏನೇ ಟೀಕೆ ಟಿಪ್ಪಣೆ ಮಾಡಿದರೂ ತಲೆಕೆಡಿಸಿಕೊಳ್ಳಬೇಡಿ ಎಂದು ಪಕ್ಷದ ವರಿಷ್ಠರು ತಾಕೀತು ಮಾಡಿದ್ದು, ಈ 5 ಗ್ಯಾರಂಟಿಗಳನ್ನು ಸರ್ಕಾರ ವ್ಯವಸ್ಥಿತವಾಗಿ ಜಾರಿಗೊಳಿಸಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆಂದರು. 

ಕ್ಷೇತ್ರದಲ್ಲಿ  ಅಧಿಕಾರಿಗಳು ಹಿಂದಿನ ಶಾಸಕರ ಅಧಿಕಾರಾವಧಿಯಲ್ಲಿ ಕಾನೂನು ಬಾಹಿರ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಮೇ 29ರ ಸೋಮವಾರದಿಂದ ಶನಿವಾರದವರೆಗೆ ತಾಲ್ಲೂಕಿನ ಎಲ್ಲಾ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಕೆಲಸ ಕಾರ್ಯಗಳ ಬಗ್ಗೆ ಪರಿವೀಕ್ಷಣೆ ನಡೆಸಲಾಗುವುದು ಎಂದು ಹೇಳಿದರು. 

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಹೊನ್ನಾಳಿ ಕ್ಷೇತ್ರದಲ್ಲಿ ಹಣ ಬಲ ಮತ್ತು ಜನ ಬಲದ ನಡುವೆ  ನಡೆದ ಚುನಾವಣೆಯಲ್ಲಿ ಜನಬಲಕ್ಕೆ ಜಯಸಿಕ್ಕಂತಾಗಿದೆ ಎಂದರು. 

ಮಾಜಿ ಶಾಸಕ ಡಾ. ಡಿ.ಬಿ.ಗಂಗಪ್ಪ ಮಾತ ನಾಡಿ, ಹೊನ್ನಾಳಿ ಮಾಜಿ ಶಾಸಕ ರೇಣುಕಾ ಚಾರ್ಯ ಅವರಿಗೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಿದ್ದಾರೆಂದರು.

ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಡಾ.ಈಶ್ವರನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಆರ್.ನಾಗಪ್ಪ,  ನ್ಯಾಮತಿ ವಾಗೀಶ್, ಜಿ.ಪಂ. ಮಾಜಿ ಸದಸ್ಯರಾದ  ಡಿ.ಜಿ.ವಿಶ್ವನಾಥ್, ಎಂ.ಆರ್.ಮಹೇಶ್, ಕುಳಗಟ್ಟೆ ಚಂದ್ರಪ್ಪ,  ಜೀವೇಶಪ್ಪ, ಬಿ.ಸಿದ್ದಪ್ಪ, ಎಚ್.ಎ. ಉಮಾಪತಿ,  ಗದ್ದಿಗೇಶಪ್ಪ, ಸಣ್ಣಕ್ಕಿ ಬಸವನಗೌಡ,  ಅಲ್ಪಸಂಖ್ಯಾತ ಘಟಕದ ಚೀಲೂರು ವಾಜೀದ್ ಮಾತನಾಡಿದರು. 

ಈ ಸಂದರ್ಭದಲ್ಲಿ ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕೆ.ಷಣ್ಮುಖಪ್ಪ, ವಸಂತನಾಯ್ಕ, ಮಹಿಳಾ ಅಧ್ಯಕ್ಷೆ ಪುಪ್ಪ, ನ್ಯಾಮತಿ ಅಧ್ಯಕ್ಷೆ ವನಜಾಕ್ಷಮ್ಮ, ಯುವ ಕಾಂಗ್ರೆಸ್‍ನ ಪ್ರಶಾಂತ್ ಬಣ್ಣಜ್ಜಿ, ಎಚ್.ಎಸ್.ರಂಜಿತ್ ಸೇರಿದಂತೆ ಅನೇಕರು ಹಾಜರಿದ್ದರು.

error: Content is protected !!