ರಾಣೇಬೆನ್ನೂರಿನಲ್ಲಿ ತುಂಗಾಜಲ ಶ್ರೀ ಚೌಡೇಶ್ವರಿ ದೇವಸ್ಥಾನದ ಕಳಸಾರೋಹಣ
ರಾಣೇಬೆನ್ನೂರು, ಮೇ 25- ಮನುಷ್ಯರಿಗೆ ಎಷ್ಟೇ ಮಾನಸಿಕವಾಗಿ ಜಂಜಾಟಗಳು ಇದ್ದರೂ ತಮ್ಮ ಭಕ್ತಿ ಮೂಲಕ ದೇವರ ಪ್ರತಿಷ್ಠಾಪನೆ, ದೇವಸ್ಥಾನ ಹಾಗೂ ಗೋಪುರ ನಿರ್ಮಾಣ ಮಾಡುವ ಮೂಲಕ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಲ್ಲಿನ ಮಾರುತಿ ನಗರದ ಶ್ರೀ ತುಂಗಾಜಲ ಚೌಡೇಶ್ವರಿ ದೇವಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ, ಧರ್ಮಸಭೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೇಶಕ್ಕೆ ಬರಗಾಲ ಬರಬಹುದು. ಆದರೆ, ನಮ್ಮ ದೇಶದಲ್ಲಿ ಭಕ್ತಿಗೆ ಬರಗಾಲವಿಲ್ಲ. ಅದನ್ನು ಎಲ್ಲಾ ಸಂದರ್ಭಗಳಲ್ಲೂ ನೋಡುತ್ತೇವೆ. ಏನೆಲ್ಲಾ ಕಷ್ಟಗಳು ಬಂದರೂ ಬದುಕನ್ನು ಹಸನುಗೊಳಿಸು ತ್ತಾರೆ. ಜೀವನದಲ್ಲಿ ಪುಣ್ಯ ಲಭಿಸಬೇಕಾದರೆ ದಾನ, ಧರ್ಮ ಮಾಡಬೇಕು. ಆಗ ಮಾತ್ರ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿ ಶ್ರೀ ಚನ್ನವೀರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಪುಣ್ಯದ ಕೆಲಸ ಮಾಡಬೇಕು. ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಉಳಿಸುವ ಜತೆಗೆ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು. ಕೆಲವರು ಕುರ್ಚಿ ಪಡೆಯಲು ಹಣ ಹಂಚುತ್ತಾರೆ. ಮನುಷ್ಯನಿಗೆ ನಿಜವಾಗಿ ಬೇಕಾಗಿರುವುದು ಕುರ್ಚಿಯಲ್ಲ. ಶಾಂತಿ, ನೆಮ್ಮದಿಯ ಜೀವನ. ಅದು ದೊರೆಯುವುದು ದೇವಸ್ಥಾನ, ಮಠ-ಮಂದಿರಗಳಿಂದ. ಆದ್ದರಿಂದ ಪ್ರತಿಯೊಬ್ಬರೂ ದೇವಸ್ಥಾನ ಕಟ್ಟಿ ಬೆಳೆಸಬೇಕು. ಅಧ್ಯಾತ್ಮದ ಚಿಂತನೆಗೆ ಒಳಗಾಗಬೇಕು. ದುಡಿದ ಹಣದಲ್ಲಿ ಕೊಂಚವಾದರೂ ಒಳ್ಳೆಯ ಕಾರ್ಯಗಳಿಗೆ ದಾನ ಮಾಡಬೇಕು ಎಂದರು.
ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಪ್ರಕಾಶಾನಂದಜೀ ಮಹಾರಾಜ್ ಮಾತನಾಡಿ, ಭಗವಂತನನ್ನು ತಂದೆ-ತಾಯಿಗಳ ರೂಪದಲ್ಲಿ ಪೂಜೆಸುವುದು ಇದೆ. ಭಗವಂತ ತಾಯಿ ಎಂದು ತಿಳಿದುಕೊಂಡರೆ, ಅದೇ ಆ ಮನುಷ್ಯನನ್ನು ಎತ್ತರಕ್ಕೆ ಬೆಳೆಸಿ ನೆಮ್ಮದಿಯ ಜೀವನ ಕರುಣಿಸುತ್ತದೆ ಎಂದರು.
ತುಂಗಾಜಲ ಚೌಡೇಶ್ವರಿ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯಾವುದೇ ಅನುದಾನ ಪಡೆಯದೇ ಭಕ್ತರ ಹಣದಿಂದ ಗೋಪುರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಶನೈಶ್ಚರ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಎಂ.ಎಸ್. ಅರಕೇರಿ, ಶಿಕಾರಿಪುರ ತಹಶೀಲ್ದಾರ್ ಜಿ. ಶಂಕರ್, ಎಲ್.ಎನ್.ಗುಂಡಗಟ್ಟಿ, ಶೇಖರಗೌಡ ಚೌಡಪ್ಪಳವರ, ಲಕ್ಷ್ಮಣ ಶೆಟ್ರು, ಎಸ್.ಆರ್. ಪಾಟೀಲ, ಪರಮೇಶಪ್ಪ ಗೂಳಣ್ಣನವರ, ಕರಬಸಪ್ಪ ಮಾಕನೂರ, ಬಸವರಾಜ ಐರಣಿ, ಬಸವರಾಜ ಗುಳೇದ, ಕರಿಬಸಪ್ಪ ಜಾಡರ, ಈರಪ್ಪ ಮುದಿಗೊಣ್ಣವರ, ಕುಮಾರ ಮಡಿವಾಳರ, ನಿಂಗಪ್ಪ ವಿಭೂತಿ, ಲಕ್ಷ್ಮಣ ಸಾಲಿ, ಏಕಾಂತ ಮುದಿಗೌಡರ, ವಿರುಪಾಕ್ಷಪ್ಪ ಮರಡಿ ಬಣಕಾರ, ದುರುಗಪ್ಪ ಹುಲುಗಮ್ಮನವರ, ಶಿವಪ್ಪ ಬೆನಕನಗೊಂಡ, ಪ್ರಮೋದ ಕೋಪರ್ಡೆ, ಪರಮೇಶಯ್ಯ ಮಠದ, ಶೇಖಪ್ಪ ನರಸಗೊಂಡರ ಸೇರಿದಂತೆ ಮತ್ತಿತರು ಇದ್ದರು.