ಅರ್ಥವಾಗಿಸಿಕೊಂಡ ವಿದ್ಯೆ ಮಾತ್ರ ಜ್ಞಾನವಾಗಲು ಸಾಧ್ಯ

ಅರ್ಥವಾಗಿಸಿಕೊಂಡ ವಿದ್ಯೆ ಮಾತ್ರ ಜ್ಞಾನವಾಗಲು ಸಾಧ್ಯ

ವಿಪ್ರ ವಟು ಶಿಕ್ಷಣ ಶಿಬಿರದಲ್ಲಿ ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ್

ದಾವಣಗೆರೆ, ಮೇ 21- ಯಾವುದೇ ಸದ್ವಿದ್ಯೆಯಾಗಲಿ ಓದಿದಾಕ್ಷಣ ಅಥವಾ ಕೇಳಿದಾಕ್ಷಣ ಅದು ಜ್ಞಾನವಾಗುವುದಿಲ್ಲ. ಓದಿದ್ದನ್ನು ಅಥವಾ ಕೇಳಿದ್ದನ್ನು ಅರ್ಥ ಮಾಡಿಕೊಳ್ಳುತ್ತಾ ಮನಸ್ಸಿಗೆ ತೆಗೆದುಕೊಳ್ಳಬೇಕು. ಹಾಗೆ ಮನಸ್ಸಿಗೆ ತೆಗೆದುಕೊಂಡಿದ್ದನ್ನು ಗಟ್ಟಿಯಾಗಿ ನೆಲೆ ನಿಲ್ಲಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಕಿವಿಮಾತು ಹೇಳಿದರು.

 ಜಿಲ್ಲಾ ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಏರ್ಪಾಡಾಗಿರುವ ವಿಪ್ರ ವಟು ಶಿಕ್ಷಣ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ತ್ರಯಂಗ ಯೋಗದ ಬಗ್ಗೆ ಅವರು ಮಾತನಾಡಿದರು.

ವೇದ, ಉಪನಿಷತ್ತು, ಆಗಮ, ಪುರಾಣ, ಇತಿಹಾಸಾದಿಗಳ ಕಾಲದಿಂದಲೂ ಶ್ರವಣ, ಮನನ, ನಿದಿಧ್ಯಾಸನವೆಂಬ ತ್ರಯಂಗ ಯೋಗಕ್ಕೆ ಪ್ರಾಮುಖ್ಯತೆ ಇದ್ದು, ಕೇಳಿದ್ದನ್ನು, ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಜೀವನ ಅನುಭವಗಳೊಂದಿಗೆ ಅದನ್ನು ಸಮೀಕರಿಸುತ್ತಾ ಮೌಲ್ಯಯುತವಾದವುಗಳನ್ನು ಮನಸ್ಸಿಗೆ ತೆಗೆದುಕೊಂಡು  ನೆಲೆಗೊಳಿಸಿಕೊಂಡಾಗ ಜ್ಞಾನವಾಗಿ ಇರುತ್ತದೆ ಎಂದರು. 

ಕೇವಲ ಬಾಯಿ ಪಾಠ ಜ್ಞಾನವಾಗುವುದಿಲ್ಲ. ಪುನರುಚ್ಛಾರವಾಗುತ್ತದೆ ಅಷ್ಟೇ, ಮಂತ್ರಗಳೂ ಅಷ್ಟೇ, ಕೇವಲ ಹೇಳಿದರೆ ಕೇಳಿದರೆ ಪ್ರಯೋಜನವಿಲ್ಲ, ಅರ್ಥ ತಿಳಿದುಕೊಳ್ಳಬೇಕು. ಅದೂ ಸಹ ನಿಘಂಟನ್ನು ನೋಡಿ ಪದ ಪದಗಳ ಅರ್ಥ ತಿಳಿಯುತ್ತಾ ಹೋದರೆ ಮಂತ್ರಗಳೂ ನಿಸ್ಸಾರವೆನಿಸುತ್ತವೆ. ಮಂತ್ರಗಳ ಆದಿ, ಭೌತಿಕದ ಆದಿ ದೈವಿಕದ ಆಚೆಗಿನ ಅಧ್ಯಾತ್ಮಿಕ ಅರ್ಥ ತಿಳಿದುಕೊಂಡಾಗ ಮಾತ್ರ ಅವುಗಳ ಮೌಲ್ಯ ಗೊತ್ತಾಗುತ್ತದೆ, ಮನದಟ್ಟಾಗುತ್ತದೆ, ಅದಕ್ಕಾಗಿ ಇಂತಹ ಶಿಬಿರಗಳು ವಿದ್ಯಾರ್ಥಿ ದೆಸೆಯಿಂದಲೇ ಅಗತ್ಯ ಎಂದ ಹೆಚ್.ಬಿ.ಮಂಜುನಾಥ್, ಜ್ಞಾನದಿಂದ ಭಯ, ಶೋಕ, ಮೋಹಗಳ ನಿವಾರಣೆ ಸಾಧ್ಯ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ದಾವಣಗೆರೆ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಶಶಿಕಾಂತ್, ಲೆಕ್ಕಪರಿಶೋಧಕರಾದ ವಿನಾಯಕ ಜೋಶಿ, ಶ್ರೀನಿವಾಸ್, ಕುಲಕರ್ಣಿ  ಮೊದಲಾದವರು ಉಪಸ್ಥಿತರಿದ್ದರು.