ಶ್ರೇಷ್ಠನಾಗಲು ವೃತ್ತಿ ಜೊತೆಗೆ ಜೀವನವೂ ಚೆನ್ನಾಗಿರಬೇಕು

ಶ್ರೇಷ್ಠನಾಗಲು ವೃತ್ತಿ ಜೊತೆಗೆ ಜೀವನವೂ ಚೆನ್ನಾಗಿರಬೇಕು

ಅವ್ವ ಹಚ್ಚಿದ ದೀಪ ಕವನ ಸಂಕಲ ಬಿಡುಗಡೆ ಸಮಾರಂಭದಲ್ಲಿ ಪ್ರೊ. ಹೆಚ್.ಎ. ಭಿಕ್ಷಾವರ್ತಿ ಮಠ

ಹರಿಹರ, ಮೇ 21- ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಪ್ರಜ್ವಲಿಸಬೇಕಾದರೆ ಸಾಮಾಜಿಕ ಜೀವನ, ಕೌಟುಂಬಿಕ ಜೀವನ, ವೃತ್ತಿ ಜೀವನದ ಜೊತೆಗೆ ವೈಯಕ್ತಿಕ ಜೀವನ ಶೈಲಿ ಚೆನ್ನಾಗಿರಬೇಕು ಎಂದು ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ. ಹೆಚ್.ಎ. ಭಿಕ್ಷಾವರ್ತಿ ಮಠ ಅಭಿಪ್ರಾಯಪಟ್ಟರು. 

ನಗರದ ಕಾಳಿದಾಸ ವಿದ್ಯಾಸಂಸ್ಥೆ ಆವರಣದಲ್ಲಿ ಹೆಚ್.ಕೆ. ಕೊಟ್ರಪ್ಪ ಹಾಗೂ ಶ್ರೀಮತಿ ಚಂದ್ರಮ್ಮ ಕೆ.ಕೊಟಗಿ ವಿವಾಹ ಸುವರ್ಣ ಮಹೋತ್ಸವದ ಸವಿನೆನಪಿ ಗಾಗಿ `ಅವ್ವ ಹಚ್ಚಿದ ದೀಪ’ ಕವನ ಸಂಕಲನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಆಧುನಿಕ ಯುಗದಲ್ಲಿ 50 ವರ್ಷಗಳ ಕಾಲ ದಂಪತಿಗಳು ಹೊಂದಾಣಿಕೆ ಜೀವನ ನಡೆಸಿಕೊಂಡು ಹೋಗುವುದು ವಿರಳ ಹಾಗೂ ವಿಶೇಷ. ಇಂತಹ ಕಾಲ ಘಟ್ಟದಲ್ಲಿ ಸಂಸಾರದಲ್ಲಿ ಅನೇಕ ಏರುಪೇರುಗಳಿದ್ದರೂ ಸಹ ಅದನ್ನು ಬದಿಗಿಟ್ಟು ಸಮಾಜದ ಏಳಿಗೆಗಾಗಿ ಕವಿತೆಯನ್ನು ರಚಿಸಿ ಅವುಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತೊಡಗಿಸಿಕೊಂಡ ಹೆಚ್.ಕೆ. ಕೊಟ್ರಪ್ಪ ನವರ ಸಾಧನೆ ಯುವಕರಿಗೆ ಮಾದರಿಯಾಗಿದೆ ಎಂದರು.

ಹಾವೇರಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ಹೊಸ ಪೀಳಿಗೆಯವರು ಯಾವ ಪದಗಳನ್ನು ಎಲ್ಲಿ ಬಳಸಿದರೆ ಅದು ಕವಿತೆಯ ಸಾರಾಂಶವನ್ನು ಎತ್ತಿ ಹಿಡಿಯಬಲ್ಲದು ಎಂಬುದರ ಅರಿವು ಇಲ್ಲದೆ ಕವಿತೆಯನ್ನು ರಚಿಸುವುದು ಕಾಣುತ್ತಿದೆ ಎಂದರು.

ದಾವಣಗೆರೆಯ ಹಿರಿಯ ಸಾಹಿತಿ ಬಾ.ಮಾ. ಬಸವರಾಜಯ್ಯ ಮಾತನಾಡಿ, ಕವಿತೆ ರಚಿಸುವಾಗ ಅದರಲ್ಲಿ ಗುಣಾತ್ಮಕ ಅಂಶಗಳು ಹೆಚ್ಚು ಇದ್ದಷ್ಟು ಕವಿತೆಗಳು ಹೆಚ್ಚು ಪ್ರಜ್ವಲಿಸುತ್ತವೆ ಎಂದರು.

ಹೆಚ್.ಕೆ. ಕೊಟ್ರಪ್ಪನವರು ತಮ್ಮ ಅನೇಕ ಕವಿತೆಗಳಲ್ಲಿ ರೈತರ ಪರವಾದ, ಸಾಮಾಜಿಕ ಕಳಕಳಿಯ ಮತ್ತು ಕಾರ್ಮಿಕರ ಕಳಕಳಿಯ ಮತ್ತು ಪರಿಸರದ ಆಗು ಹೋಗುಗಳ, ಆದರ್ಶ ಬದುಕಿನ ವಿಚಾರಕ್ಕೆ ಸಂಬಂಧಿಸಿದಂತೆ ಕವಿತೆಯನ್ನು ರಚಿಸಿ ಅದರಲ್ಲಿ ಸಾಕಷ್ಟು ಗುಣಾತ್ಮಕ ಅಂಶಗಳನ್ನು ತೊಡಗಿಸಿದ್ದಾರೆ ಎಂದರು. 

ಕವನ ಸಂಕಲನ ಕುರಿತು ಮಾತನಾಡಿದ ಹಿರಿಯ ಬಂಡಾಯ ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ್, ನನ್ನ ಸುತ್ತಮುತ್ತಲಿನ ಪರಿಸರ ಚೆನ್ನಾಗಿ ಇರಬೇಕು ಎಂಬ ಮಾನವೀಯ ಮೌಲ್ಯಗಳ ಅಂಶಗಳು ಕವನದಲ್ಲಿ ಇದ್ದರೆ ಸಮಾಜದಲ್ಲಿ ಸಹಿಷ್ಣುತೆಯ ಸಂದೇಶ ರಚನೆ ಆಗುತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಮಂಜುನಾಥ್ ಕುರ್ಕಿ ಮಾತನಾಡಿ ಅಧಿಕಾರ, ದೊಡ್ಡ ಮನೆ, ಬ್ಯಾಂಕ್ ಬ್ಯಾಲೆನ್ಸ್, ಸನ್ಮಾನ, ಗೌರವ, ಆದಾಯ, ಇವುಗಳು ಇದ್ದರೆ ಮಾತ್ರ ಶ್ರೇಷ್ಠತೆಯನ್ನು ಕೊಡುತ್ತವೆ ಎಂದು ಭಾವಿಸುವುದರ ಬದಲಿಗೆ ಸಾಮಾಜಿಕ ಕಾರ್ಯವಿ ಧಾನಗಳು ಮನುಷ್ಯನ ಶ್ರೇಷ್ಠತೆಯನ್ನು ಹೆಚ್ಚಿಸುತ್ತವೆ ಎಂದು ಭಾವಿಸಿಕೊಂಡು ಹೋಗಬೇಕು ಎಂದರು.

ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿ, ಸಂಸಾರದಲ್ಲಿ ಮತ್ತು ಸಾಮಾಜಿಕ ರಂಗದಲ್ಲಿ ಇಷ್ಟೆಲ್ಲ ಸಾಧನೆ ಮಾಡಲು ಪತ್ನಿ ಚಂದ್ರಮ್ಮ ಜೊತೆಗೆ ನನ್ನ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಸಾಹಿತ್ಯಾಸಕ್ತರ ಸ್ನೇಹ ಬಳಗ ಉತ್ತಮ ಸಹಕಾರ ನೀಡಿದ್ದು ಸಹಕಾರಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಹಿರಿಯ ಸಾಹಿತಿ ಸಿ.ವಿ. ಪಾಟೀಲ್ ಮಾತನಾಡಿ, ನಾಡಿಗೆ ಮತ್ತು ಮನೆಗೆ ಶ್ರೇಷ್ಠ ವ್ಯಕ್ತಿ ಆಗುವಾಗ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆ, ಚಾತುರ್ಯ, ಸಹನಾಶೀಲತೆ ಹಾಗೂ ದಕ್ಷತೆಯ ಗುಣಗಳು ಇರುವವರಿಂದ ಸಾಮಾಜಿಕ ರಂಗದಲ್ಲಿ ಪ್ರಬುದ್ಧತೆ ಮೆರೆಯಲು ಸಾಧ್ಯ ಎಂದರು.

ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ್ ನುಡಿದರು. ಸಾಹಿತಿ ಎ. ಬಿ. ರಾಮಚಂದ್ರಪ್ಪ, ಡಾ ಹೆಚ್. ವಿಶ್ವನಾಥ್, ವಕೀಲರು ಎಂ. ನಾಗೇಂದ್ರಪ್ಪ ಇತರರು ಮಾತನಾಡಿದರು.

ಈ ಸಂದರ್ಭದಲ್ಲಿ ಚಂದ್ರಮ್ಮ ಹೆಚ್.ಕೆ. ಕೊಟ್ಟಪ್ಪ, ವಿನಯ್ ಕೊಟ್ರಪ್ಪ,  ಹಿರಿಯ ಸಾಹಿತಿಗಳಾದ ಸಿ.ವಿ. ಪಾಟೀಲ್, ಜೆ. ಕಲೀಂಭಾಷಾ, ಸಿಪಿಐ ವಿಶೇಷ ಘಟಕ ಯಾದಗಿರಿ ದೇವೇಂದ್ರಪ್ಪ ಕುಣೆಬೆಳಕೇರಿ,  ಹಿರಿಯ ಕ್ರೀಡಾಪಟು ಹೆಚ್. ನಿಜಗುಣ,  ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಕೆ.ಬಿ. ರಾಜಶೇಖರ,  ಟಿ. ಇನಾಯತ್ ಉಲ್ಲಾ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ನಂದಿಗುಡಿ ಶ್ರೀನಿವಾಸ್, ಬಿ.ಬಿ. ರೇವಣನಾಯ್ಕ್, ರಿಯಾಜ್ ಆಹ್ಮದ್,ಎಂ. ಚಿದಾನಂದ ಕಂಚಿಕೇರಿ,  ವಿ.ಬಿ.ಕೊಟ್ರೇಶ್, ಎಂ. ಎಕ್ಕಿಗೊಂದಿ ರುದ್ರಗೌಡ, ಸದಾಶಿವ,  ಮಲೇಬೆನ್ನೂರು ಮಂಜುನಾಥ್ ಪಾಟೀಲ್, ಹುಲಿಕಟ್ಟಿ ಚೆನ್ನಬಸಪ್ಪ, ವೈ ಕೃಷ್ಣಮೂರ್ತಿ, ಗಂಗಾಧರ ಕೊಟಗಿ, ಎ.ಕೆ.‌ಭೂಮೇಶ್ ವಿಜಯ ಮಹಾಂತೇಶ್, ಎನ್. ಇ. ಸುರೇಶ್, ಶೇಖರಗೌಡ , ಹೆಚ್.ಸಿ.‌ಕೀರ್ತಿಕುಮಾರ್, ಕೆ. ಪಂಚಾಕ್ಷರಿ, ಹೆಚ್.ಸುಧಾಕರ,   ಕೃಷ್ಣ ಪಿ. ರಾಜೊಳ್ಳಿ, ಜಿಗಳಿ ಪ್ರಕಾಶ್, ಆನಂದಪ್ಪ ಜಿಗಳಿ, ನಾಗರಾಜ್ ಗೌಡ, ಪ್ರೀತಂ ಬಾಬು, ರಮೇಶ್ ಮಾನೆ, ಮುರುಗೇಶಪ್ಪ, ಹೆಚ್. ಮಲ್ಲೇಶ್,  ಸಿದ್ದಲಿಂಗಸ್ವಾಮಿ, ಬಿ. ಮುಗ್ದಂ,  ನಿರ್ಮಲಾ   ಇತರರು ಹಾಜರಿದ್ದರು.

error: Content is protected !!