ನಗರಾದ್ಯಂತ ಸಡಗರ – ಸಂಭ್ರಮದಿಂದ ರಂಜಾನ್ ಆಚರಣೆ

ನಗರಾದ್ಯಂತ ಸಡಗರ – ಸಂಭ್ರಮದಿಂದ ರಂಜಾನ್ ಆಚರಣೆ

ದಾವಣಗೆರೆ, ಏ. 22- ಪವಿತ್ರ ರಂಜಾನ್ ಹಬ್ಬವನ್ನು ನಗರಾದ್ಯಂತ ಮುಸ್ಲಿಂ ಬಾಂಧವರು ಇಂದು ಸಡಗರ – ಸಂಭ್ರಮದಿಂದ ಆಚರಿಸಿದರು.

ಪಿ.ಬಿ. ರಸ್ತೆ, ಹಳೆ ಈದ್ಗಾ, ರಜಾಉಲ್ ಮುಸ್ತಾಫನಗರ, ಎಸ್‌ಓಜಿ ಕಾಲೋನಿಯಲ್ಲಿರುವ ಹೊಸ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಈದ್-ಉಲ್-ಫಿತರ್‌ ನಮಾಜ್ ಸಲ್ಲಿಸಿದರು.

ಕಳೆದ ಒಂದು ತಿಂಗಳಿನಿಂದ ಉಪವಾಸ, (ರೋಜಾ) ಧ್ಯಾನದಲ್ಲಿ ಮಗ್ನರಾಗಿದ್ದ ಮುಸ್ಲಿಂ ಬಾಂಧವರು ಚಂದ್ರದರ್ಶನದೊಂದಿಗೆ ರಂಜಾನ್ ಹಬ್ಬವನ್ನು ಆಚರಿಸುವ ಮೂಲಕ ಒಬ್ಬರಿಗೊಬ್ಬರು ಆಲಂಗಿಸಿ, ಹಸ್ತಲಾಘವ ಮಾಡಿ ಸಂತೋಷವನ್ನು ವಿನಿಮಯ ಮಾಡಿಕೊಂಡರು.

ಹೊಸ ಬಟ್ಟೆಯನ್ನು ಧರಿಸಿಕೊಂಡು ತಮ್ಮ ತಮ್ಮ ಮಕ್ಕಳೊಂದಿಗೆ ನಗರದ ವಿವಿಧ ಪ್ರದೇಶಗಳಿಂದ ತಂಡೋಪ ತಂಡವಾಗಿ ಈದ್ಗಾದತ್ತ ಧಾವಿಸುತ್ತಿದ್ದ ಮುಸ್ಲಿಂ ಬಾಂಧವರು ರಸ್ತೆಯುದ್ದಕ್ಕೂ `ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್’ ಎಂಬ ಶ್ಲೋಕಗಳನ್ನು ಪಠಿಸುತ್ತಾ ಹೆಜ್ಜೆ ಹಾಕುತ್ತಿದ್ದರು.

ತಮ್ಮ ಪ್ರಾಣ, ಆಸ್ತಿ, ಆಭರಣಗಳ ತೆರಿಗೆ ಅಂದರೆ ಜಕಾತ್-ಫಿತ್ರಾದ ಹಣವನ್ನು ಬಡವರಿಗೆ, ನಿರ್ಗತಿಕರಿಗೆ ನೀಡುವ ಮೂಲಕ ಸರ್ವರೂ ಸಹ ಸಂತೋಷದ ಕ್ಷಣಗಳು ಸವಿಯಲಿ ಎಂಬ ಮಹತ್ವ ಹೊಂದಿರುವ ರಂಜಾನ್ ಹಬ್ಬದಲ್ಲಿ ವಿಶೇಷ ಪ್ಯಾಕೇಜ್ (ಆಹಾರ ಸಾಮಗ್ರಿ) ಗಳನ್ನು ನೀಡಿ ಸಂಭ್ರಮಿಸಿದರು.

ತಂಜೀಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಈದ್ ಪ್ರಾರ್ಥನೆಯನ್ನು ಬೋಧಿಸಿದ ಮೌಲಾನಾ ಸೈಯದ್ ನಸೀರ್ ಅಹಮ್ಮದ್ ಮಿಸ್ಸಾಯಿ ಅವರು, ವಿಶ್ವಾದಾದ್ಯಂತ ಸಮಸ್ತ ಬಾಂಧವರಿಗೆ ಸುಖ, ಶಾಂತಿ, ಸಮೃದ್ಧಿಯನ್ನು `ಅಲ್ಲಾಹು’ ನೀಡಲಿ ಎಂದು ದುವಾ ಮಾಡುವ ಮೂಲಕ ತಮ್ಮ ತಮ್ಮ ಮಕ್ಕಳಿಗೆ ಸಾಮಾಜಿಕ ಶಿಕ್ಷಣದ ಮೂಲಕ ಧಾರ್ಮಿಕ ಶಿಕ್ಷಣವನ್ನೂ ಸಹ ಕೊಡಿಸಲು ಮುಂದಾಗಿ ಎಂದು ಪೋಷಕರಿಗೆ ಕರೆ ನೀಡಿ ಹಬ್ಬದ ಶುಭಾಶಯ ಕೋರಿದರು.

 ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮೌಲಾನಾ ನಸೀರ್ ಅಹಮದ್ ಅವರು, ವಿಶ್ವದಲ್ಲಿನ ಘಟನಾವಳಿಗಳ ಬಗ್ಗೆ ಅರಿಯ ಬೇಕೆಂದು ವಿವರಿಸಿ, ಸರ್ವರೂ ಸಹಬಾಳ್ವೆಯೊಂದಿಗೆ ಸಾಗಬೇಕೆಂದು ಸಂದೇಶ ನೀಡಿದರು.

ಸಮಯ, ಪ್ರಚಾರ ಸ್ವಲ್ಪ ಗೊಂದಲ : ರಂಜಾನ್ ಹಬ್ಬದ ಪ್ರಾರ್ಥನೆ ಪ್ರತಿ ವರ್ಷ ಬೆಳಿಗ್ಗೆ 10.30 ಕ್ಕೆ ನಿಗದಿಗೊಳಿಸಲಾಗುತ್ತಿತ್ತು. ಆದರೆ, ತಂಜೀಮುಲ್‌ನ ನೂತನ ಕಮಿಟಿ ಈ ಬಾರಿ 10 ಗಂಟೆಗೆ ಪ್ರಾರ್ಥನೆಯ ಸಮಯ ನಿಗದಿಗೊಳಿಸಿದ್ದಕ್ಕೆ ಕೆಲವರು ತೊಂದರೆ ಅನುಭವಿಸಬೇಕಾದ ಪ್ರಸಂಗಕ್ಕೆ ಒಳಗಾದರೂ ಇನ್ನೂ ಜನ ಆಗಮಿಸುತ್ತಿದ್ದರು. `ವಜೂ’ ಮಾಡುತ್ತಿದ್ದರು. ಅಷ್ಟರಲ್ಲಿಯೇ ಪ್ರಾರ್ಥನೆಗೆ ನಿಂತಾಗ ತಮ್ಮ ತಮ್ಮ ಸ್ಥಳಗಳನ್ನು ಹುಡುಕಿಕೊಂಡು ಹೋಗಲು ಕಷ್ಟವಾಯಿತು.

ಅಷ್ಟೇ ಅಲ್ಲದೇ, ನಿನ್ನೆಯ ದಿನ ಪತ್ರಿಕೆಗಳಲ್ಲಿ ಚಂದ್ರ ಗೋಚರಿಸದಿದ್ದರೆ ಭಾನುವಾರ ಹಬ್ಬ ಎಂಬ ತಂಜೀಮ್ ನ ವರದಿ ಸ್ಪಲ್ಪ ಗೊಂದಲ ನಿರ್ಮಿಸಿತ್ತು ಎಂಬ ಅಂಶವನ್ನು ವಿವರಿಸಿದ ಕೆಲವರು ತಮ್ಮ ಸಂಬಂಧಿಗಳಿಗೆ ಈ ಮಾಹಿತಿಯನ್ನು ನೀಡಿ ಮುಜುಗರಕ್ಕೀಡಾದ ಮಾಹಿತಿ ಲಭ್ಯವಾಯಿತು.

ಜನಸಂದಣಿ ಹೆಚ್ಚಾದರೂ ಸಹ ಒಂದೇ ಗೇಟ್ ಮೂಲಕ ಆಗಮನ-ನಿರ್ಗಮನವಾಗುವುದರಿಂದ ಹಿರಿಯ ಮುತ್ಸದ್ಧಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಈದ್ಗಾಕ್ಕೆ ಇನ್ನೊಂದು ಗೇಟ್ ನಿರ್ಮಾಣದ ಅವಶ್ಯಕತೆ ಇದೆ ಎಂಬುದನ್ನು ಸಲಹೆ ಮಕಬುಲ್ ಅಹಮದ್ ತಂಜೀಮುಲ್‌ಗೆ ನೀಡಿದರು.

ತಂಜೀಮ್ ಅಧ್ಯಕ್ಷ ದಾದಾಪೀರ್ (ದಾದು ಸೇಠ್) ಅವರು ಸಮಾಜದ ಅಭಿವೃದ್ಧಿ ಕುರಿತು ಸಂದೇಶ ನೀಡಿ ಸರ್ವ ರಿಗೂ ಹಬ್ಬದ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳನ್ನು ಪುರಸ್ಕರಿಸಲಾಯಿತು.  

error: Content is protected !!