4ನೇ ದಿನಕ್ಕೆ ಕಾಲಿಟ್ಟ ವೈದ್ಯ ವಿದ್ಯಾರ್ಥಿಗಳ ಮುಷ್ಕರ
ದಾವಣಗೆರೆ, ಜು.2- 16 ತಿಂಗಳ ಶಿಷ್ಯ ವೇತನಕ್ಕಾಗಿ ಜೆಜೆಎಂ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿ ಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನವೂ ಸಹ ಮುಂದುವರೆಯಿತು.
ನಗರದ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ವಿದ್ಯಾರ್ಥಿಗಳು ಮಳೆಯಲ್ಲೇ ನೆನೆಯುತ್ತಾ ಧರಣಿ ಹೂಡಿ ಬಿಗಿಪಟ್ಟು ಹಿಡಿದಿದ್ದು ಸಂಜೆ ವೇಳೆಗೆ ಸಂಸದ ಜಿ.ಎಂ. ಸಿದ್ದೇಶ್ವರ್, ಎಂಎಲ್‍ಸಿ ನಾರಾಯಣಸ್ವಾಮಿ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಎಸ್ಪಿ ಹನುಮಂತ ರಾಯ ಅವರೊಂದಿಗೆ ಪ್ರತಿಭಟನಾ ಸ್ಥಳಕ್ಕಾಗಮಿಸಿ, ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ವಿದ್ಯಾರ್ಥಿ ಗಳಿಗೆ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಸಹ ಸಂಧಾನ ಸಫಲ ಕಾಣಲಿಲ್ಲ. ನಮಗೆ ಮೌಖಿಕ ಭರವಸೆಗಿಂತ ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟು ಹಿಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಪ್ರತಿಭಟನಾ ನಿರತರೊಂದಿಗೆ ಮಾತನಾಡುತ್ತಾ, ನಿಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವುದು ತಪ್ಪಲ್ಲ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ನೀವೆಲ್ಲ ಸೈನಿಕ ರಂತೆ ಹೋರಾಡಿದ್ದೀರಿ. ಇಂತಹ ಸಮಯದಲ್ಲಿ ನೀವು ಹೀಗೆ ಪ್ರತಿಭಟಿಸುವುದು ಸೂಕ್ತವಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು ಪ್ರತಿಭಟನೆ ವಾಪಸ್ ಪಡೆದು ಕರ್ತವ್ಯಕ್ಕೆ ಮರಳಿರಿ. ಆರೋಗ್ಯ ಸಚಿ ವರು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಮಗೆ ಬರ ಬೇಕಾದ ಶಿಷ್ಯ ವೇತನವನ್ನು ಒಂದು ವಾರದಲ್ಲಿ ಕೊಡಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ವಿಧಾನ ಪರಿಷತ್ ಶಾಸಕ ನಾರಾಯಣ ಸ್ವಾಮಿ ಮಾತನಾಡಿ, ನನಗೆ ನಿಮ್ಮ ಸಮಸ್ಯೆ ಬಗ್ಗೆ ಅರಿವಿದೆ. ಆದ್ದರಿಂದ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು, ಉಪ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಈ ಸಮಸ್ಯೆ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಬಳಿ ಕುಳಿತು ಚರ್ಚಿಸಿ ಒಂದು ಪರಿಹಾರ ಕಂಡುಕೊಳ್ಳಲಾಗುವುದು. ನಮ್ಮಲ್ಲಿ ವಿಶ್ವಾಸ ಇಟ್ಟು ಪ್ರತಿಭಟನೆ ಕೈಬಿಡಿರೆಂದು ಮನವಿ ಮಾಡಿದರು.
ಗೃಹ ವೈದ್ಯ ಡಾ. ಹರೀಶ್ ಮಾತನಾಡಿ, 16 ತಿಂಗಳಿಂದ ನಮ್ಮನ್ನು ಕೇಳುವವರು ಇರಲಿಲ್ಲ. ಶಿಷ್ಯ ವೇತನ ಇಲ್ಲದೇ ಬಹಳ ಕಷ್ಟಪಟ್ಟಿದ್ದೀವಿ. ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತಿದೆ. ವೈದ್ಯಕೀಯ ಕಾಲೇಜಿನ ಮ್ಯಾನೇಜ್‍ಮೆಂಟ್‍ನವರು ಸರ್ಕಾರ ಶಿಷ್ಯ ವೇತನ ನೀಡಬೇಕು ಎಂದರೆ, ಸರ್ಕಾರ ಮ್ಯಾನೇಜ್‍ಮೆಂಟ್‍ನವರೇ ನೀಡಬೇಕು ಎನ್ನುತ್ತಿದೆ. ಜಿಲ್ಲಾಧಿಕಾರಿಗಳು ಮೂರು ದಿನಗಳ ಕಾಲ ಸಮಯ ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದರು. ಆಗ ಪ್ರತಿಭಟನೆ ವಾಪಸ್ ಪಡೆದಿದ್ದೆವು. ಆದರೆ ನಮ್ಮ ಸಮಸ್ಯೆಗೆ ಪರಿಹಾರ ದೊರಕಲಿಲ್ಲ. ನ್ಯಾಯ ಸಿಗುವವರೆಗೆ ನಾವು ಪ್ರತಿಭಟನೆ ಕೈಬಿಡುವುದಿಲ್ಲವೆಂದರು.
ಉಪವಾಸ ಸತ್ಯಾಗ್ರಹ-ನೇತ್ರದಾನ: ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇಂದು ಹೋರಾ ಟದ ತೀವ್ರ ಸ್ವರೂಪವಾಗಿ ಉಪವಾಸ ಸತ್ಯಾಗ್ರಹದ ಮುಖೇನ ಸರ್ಕಾರದ ಗಮನ ಸೆಳೆ ದರು. ಅಲ್ಲದೇ ಸುಮಾರು 23 ಮಂದಿ ವಿದ್ಯಾರ್ಥಿಗಳು ತಮ್ಮ ನೇತ್ರ ದಾನ ಮಾಡುವುದಾಗಿ ಘೋಷಿಸಿ, ಪತ್ರಕ್ಕೆ ಸಹಿ ಹಾಕಿದರು. ಅವರಿಗೆ ನೇತ್ರದಾನದ ಗುರುತಿನ ಪತ್ರ ವಿತರಿಸಲಾಯಿತು.
ಸಿಎಂ ನೇತೃತ್ವದ ಸಭೆಯ ಸಂದೇಶ: ಶಿಷ್ಯ ವೇತನ ಸಮಸ್ಯೆ ಕುರಿತು ಜುಲೈ 6ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂಬ ಸೂಚನೆ ರಾಜ್ಯ ಸರ್ಕಾರ ದಿಂದ ಜಿಲ್ಲಾಡಳಿತಕ್ಕೆ ಬಂದಿದೆ ಎಂಬ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳ ಸಂದೇಶವನ್ನು ಮಧ್ಯಾಹ್ನ ನಗರ ಉಪವಿಭಾಗದ ಡಿವೈಎಸ್ಪಿ ನಾಗೇಶ್ ಐತಾಳ್ ವಿದ್ಯಾರ್ಥಿಗಳಿಗೆ ಮುಟ್ಟಿಸಿದರು. ಸಂದೇಶ ಹೊತ್ತು ತಂದ ಪೊಲೀಸರು ವಿದ್ಯಾರ್ಥಿಗಳ ಮನವಿಯಂತೆ ನೆರಳಿನ ವ್ಯವಸ್ಥೆಗೆ ಅವಕಾಶ ನೀಡಿದರು.
ಜಿ.ಎಂ. ಸಿದ್ದೇಶ್ವರ ಮತ್ತು ನಾರಾಯಣ ಸ್ವಾಮಿ ಮಾತನಾಡಿ, ಗೃಹ ವೈದ್ಯರಿಗೆ ಶಿಷ್ಯ ವೇತನ ನೀಡುವ ಬಗ್ಗೆ ಪ್ರತಿ ವರ್ಷ ಸಮಸ್ಯೆ ಆಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಜೊತೆ ಮಾತನಾಡಿದಾಗ ಸರ್ಕಾರದ ವತಿಯಿಂದ ನೀಡಿದರೆ ಆಡಿಟ್ ಆಕ್ಷೇಪಣೆಯಾಗುತ್ತದೆ. ಆದ ಕಾರಣ ಸರ್ಕಾರದಿಂದ ನೀಡಲು ಬರುವುದಿಲ್ಲ. ಮೆಡಿಕಲ್ ಕಾಲೇಜು ಮ್ಯಾನೇಜ್‍ಮೆಂಟ್‍ನವರು ನೀಡಬೇಕು ಎಂದಿದ್ದಾರೆ. ಮ್ಯಾನೇಜ್‍ಮೆಂಟ್‍ನವರು ನಾವು ಕೊಡಲು ಬರುವುದಿಲ್ಲ. ಸರ್ಕಾರದಿಂದ ಭರಿಸಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಅವರೊಡನೆ ಕುಳಿತು ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಒಂದು ವಾರದಲ್ಲೇ ಹಣ ಬಿಡುಗಡೆ ಮಾಡಿಸಲಾಗುವುದು. ಆದ ಕಾರಣ ಪ್ರತಿಭಟನೆಯಿಂದ ಹಿಂದೆ ಸರಿದು ಕರ್ತವ್ಯಕ್ಕೆ ಹಾಜರಾಗಿರಿ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆ ಮುಂದುವರೆಸುವಿರಂತೆ ಎಂದು ಪುನಃ ಮನವೊಲಿಸಲು ಯತ್ನಿಸಿದರು.
ಆಗ ವೈದ್ಯ ವಿದ್ಯಾರ್ಥಿಗಳು, ಕಳೆದ 16 ತಿಂಗಳಿಂದ ನಮಗೆ ಶಿಷ್ಯ ವೇತನ ಸಿಗದೇ ನೊಂದಿದ್ದು, ನಿಮಗೆ ಕೇಳಲಿಲ್ಲವೇ, ನಾವು ಬೀದಿಗೆ ಬಂದ ಮೇಲೆಯೇ ನಿಮಗೆ ನಾವು ಕಂಡೆವಾ, ಕೇವಲ ಮೌಖಿಕ ಭರವಸೆ ಬದಲು ಲಿಖಿತ ರೂಪದಲ್ಲಿ ನೀಡುವಂತೆ ಕೇಳಿದರು. ಇದಕ್ಕೆ ಸಿದ್ದೇಶ್ವರ ಮಾತನಾಡಿ, ನಾವು ಸರ್ಕಾರವಲ್ಲ. ಜನಪ್ರತಿನಿಧಿಗಳು, ನಾವು ಹಾಗೆ ಲಿಖಿತವಾಗಿ ನೀಡಲು ಸಾಧ್ಯವಿಲ್ಲ. ಸಿಎಂ ಜೊತೆ ಚರ್ಚಿಸಿ ಬಗೆಹರಿಸಲು ಪ್ರಯತ್ನಿಸಲಾಗುವುದು. ನೀವು ಹೀಗೆ ಮತ್ತೆ ಹೋರಾಟಕ್ಕಿಳಿದರೆ ಪ್ರಯತ್ನಿಸಲು ಆಗಲ್ಲವೆಂದರು.
ನಂತರ ವಿದ್ಯಾರ್ಥಿಗಳಿಗೆ ಸಿದ್ದೇಶ್ವರ ಹಾಗೂ ನಾರಾಯಣಸ್ವಾಮಿ ಜ್ಯೂಸ್ ಬಾಟಲ್ ವಿತರಿಸಿ ಪ್ರತಿಭಟನೆ ಕೈ ಬಿಡುವಂತೆ ಪುನಃ ಮನವೊಲಿಸಿದರೂ ಸಹ ಪಟ್ಟು ಸಡಿಲಿಸದ ವಿದ್ಯಾರ್ಥಿಗಳು, ಮೌಖಿಕ ಭರವಸೆ ಒಪ್ಪುವುದಿಲ್ಲ. ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುವುದಾಗಿ ಹೋರಾಟ ಮುಂದುವರೆಸಿದರು. ಅಲ್ಲದೇ ಶಿಷ್ಯ ವೇತನ ಸಿಗಲು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುವಂತೆ ಸಿದ್ದೇಶ್ವರ, ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ನೀಡಿದರು. ನಂತರ ಸಂಧಾನ ಸಫಲ ಕಾಣದೇ ಸಿದ್ದೇಶ್ವರ, ನಾರಾಯಣಸ್ವಾಮಿ ವಾಪಸ್ ತೆರಳಿದರು.
`ಕೇಳಿದರೆ ಕಾಸು, ಕೊಡುತಾರೆ ಜೂಸು’ ಎಂಬುದಾಗಿ ಈ ವೇಳೆ ವಿದ್ಯಾರ್ಥಿಗಳು ತಮ್ಮ ಹೋರಾಟಕ್ಕೆ ಹೊಸ ಘೋಷ ವಾಕ್ಯ ಕೂಗಿದರು.
ಡಾ. ರಾಹುಲ್, ಡಾ. ಸುಧಾಕರ್, ಡಾ. ರೋಹಿತ್, ಡಾ. ಆಕಾಶ್, ಡಾ. ಹಿತಾ, ಡಾ. ಈಶ್ವರ್, ಡಾ. ನಿಧಿ, ಡಾ. ಶಿವಾನಿ, ಡಾ. ಮೇಘನಾ ಸೇರಿದಂತೆ ಇತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.