ಸಿ.ಜಿ. ಆಸ್ಪತ್ರೆಯ ಎಕ್ಸ್ರೇ ಟೆಕ್ನೀಷಿಯನ್ ಹಾಗೂ ಹಗೆದಿಬ್ಬ ವೃತ್ತದ ಬಳಿಯ ಅವಿಭಕ್ತ ಕುಟುಂಬದ ನಾಲ್ವರಲ್ಲಿ ಸೋಂಕು ಪತ್ತೆ
ದಾವಣಗೆರೆ, ಜೂ. 19- ಐವರು ಗರ್ಭಿಣಿಯರು ಸೇರಿದಂತೆ 12 ಜನರಲ್ಲಿ ಕೊರೊನಾ ಸೋಂಕು ದೃಢ ಪಟ್ಟ ಬಗ್ಗೆ ಶುಕ್ರವಾರ ವರದಿಯಾಗಿದೆ.
ಹರಿಹರದ 18 ವರ್ಷದ ಗರ್ಭಿಣಿಯು ರಾಜನಹಳ್ಳಿಯಲ್ಲಿರುವ ತನ್ನ ತವರು ಮನೆಗೆ ತೆರಳಿದ್ದರು. ಅಲ್ಲಿಂದ ಹರಿಹರಕ್ಕೆ ಆರೋಗ್ಯ ತಪಾಸಣೆಗೆ ಬಂದ ವೇಳೆ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎನ್ನಲಾಗಿದೆ.
ದೊಡ್ಡ ಬಾತಿಯ ಕುಂಚೂರು ಕ್ಯಾಂಪ್ನಲ್ಲಿನ 20 ವರ್ಷದ ಗರ್ಭಿಣಿ, ಆವರಗೊಳ್ಳದ ಇಬ್ಬರು ಗರ್ಭಿಣಿ ಯರಲ್ಲೂ ಸೋಂಕು ಪತ್ತೆಯಾಗಿದೆ. ದಾವಣಗೆರೆಯ ಮುದ್ದಾಭೋವಿ ಕಾಲೋನಿಯ 22 ವರ್ಷದ ಗರ್ಭಿಣಿ ಈಗ್ಗೆ ಒಂದು ತಿಂಗಳ ಹಿಂದೆ ದುರ್ಗಾಂಬಿಕಾ ಕ್ಯಾಂಪ್ನಲ್ಲಿದ್ದ ತವರು ಮನೆಗೆ ತೆರಳಿದ್ದರು. ನಂತರ ಅವರು ದೊಡ್ಡ ಬಾತಿಯಲ್ಲಿ ತಪಾಸಣೆ ಮಾಡಿಸಿಕೊಂಡಾಗ ಅವರಲ್ಲಿ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿದೆ. ಒಟ್ಟಾರೆ ಐವರು ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದೆಯಾದರೂ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಉಳಿದಂತೆ ಚಿಲ್ಲಾ ಚಿಗಟೇರಿ ಆಸ್ಪತ್ರೆಯ ಎಕ್ಸ್ರೇ ವಿಭಾಗದ ಟೆಕ್ನೀಷಿಯನ್ 28 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಪ್ರಾಯಶಃ ರೋಗಿಗಳ ಸಂಪರ್ಕದಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ
ಹಗೇದಿಬ್ಬ ವೃತ್ತದಲ್ಲಿನ ಅವಿಭಕ್ತ ಕುಟುಂಬದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಹಿಂದೆ ಅದೇ ಕುಟುಂಬದ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಉಳಿದಂತೆ ನಗರದ ತರಳಬಾಳು ಬಡಾವಣೆಯಲ್ಲಿ ಈ ಹಿಂದೆ ಸೋಂಕು ಪತ್ತೆ ಯಾಗಿದ್ದ ಪ್ರಾಧ್ಯಾಪಕರ ಪತ್ನಿಯೂ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 245 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 215 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. ಪ್ರಸ್ತುತ 24 ಸಕ್ರಿಯ ಪ್ರಕರಗಣಗಳು ಇವೆ.