ದಾವಣಗೆರೆ, ಮೇ 12 – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಅನ್ವಯ ಕೆಂಪು ವಲಯದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಗಳನ್ನು ನಗರಕ್ಕೂ ಅನ್ವಯಿಸಿ ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ನಗರದಲ್ಲಿರುವ ಎಲ್ಲ ರೀತಿಯ ಸರಕುಗಳನ್ನು ಮಾರುವ ಒಂಟಿ ಅಂಗಡಿಗಳು, ಬಡಾವಣೆಯಲ್ಲಿರುವ ಅಂಗಡಿಗಳು ಮತ್ತು ವಸತಿ ಪ್ರದೇಶದಲ್ಲಿರುವ ಅಂಗಡಿಗಳು ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ. ಫೋಟೋ ಹಾಗೂ ವಿಡಿಯೋ ಸ್ಟುಡಿಯೋಗಳು, ಗ್ಯಾರೇಜ್‌ಗಳನ್ನೂ ಸಹ ತೆರೆಯಬಹುದಾಗಿದೆ. ಆದರೆ, ಕಟಿಂಗ್ ಷಾಪ್, ಸ್ಪಾ, ಬ್ಯೂಟಿ ಪಾರ್ಲರ್ ಇತ್ಯಾದಿಗಳಿಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮಾಲ್ ಹಾಗೂ ಮಾರುಕಟ್ಟೆ ಸಂಕೀರ್ಣಗಳ ಮೇಲಿನ ನಿರ್ಬಂಧ ಮುಂದುವರೆಯಲಿದೆ. ಆದರೆ, ಮಾಲ್ ಹಾಗೂ ಮಾರುಕಟ್ಟೆಗಳು ಅಗತ್ಯ ವಸ್ತುಗಳನ್ನು ಮಾರುತ್ತಿದ್ದರೆ ಅವುಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ನಿಯಮ ಪಾಲಿಸದಿದ್ದರೆ ಅಂಗಡಿ ಬಂದ್: ಎಚ್ಚರಿಕೆ : ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳನ್ನು ನಿರ್ವಹಿಸುವವರು ಸರ್ಕಾರ ವಿಧಿಸುವ ಷರತ್ತುಗಳನ್ನು ಪಾಲಿಸಬೇಕಿದೆ. ಶುಚಿತ್ವ, ನೈರ್ಮಲ್ಯ ಹಾಗೂ ಸಾಮಾಜಿಕ ಅಂತರಕ್ಕೆ ಬದ್ಧವಾಗಿರ ಬೇಕಿದೆ. ಇದಕ್ಕಾಗಿ ಅವರು ನಗರ ಪಾಲಿಕೆಗೆ ಸ್ವಯಂ ಘೋಷಣೆ ಬರೆದು ಕೊಟ್ಟ ನಂತರವೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಎರಡು ಬಾರಿ ಎಚ್ಚರಿಕೆ ನೀಡಲಾಗುವುದು. ಮೂರನೇ ಬಾರಿ ಅಂಗಡಿ ಬಂದ್ ಮಾಡಿ, ಲಾಕ್ಡೌನ್ ನಿರ್ಬಂಧಗಳು ಇರುವವರೆಗೂ ಅಂಗಡಿ ತೆರೆಯಲು ಅವಕಾಶ ನೀಡುವುದಿಲ್ಲ. ಅಂಗಡಿಗಳ ಮೇಲೆ ನಿಗಾ ವಹಿಸಲು ನಗರ ಪಾಲಿಕೆಯಿಂದ ತಂಡವನ್ನು ರಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ನಗರದಲ್ಲಿ ಏನಿರುವುದಿಲ್ಲ : ಅಂತರ ಜಿಲ್ಲೆ ಹಾಗೂ ರಾಜ್ಯ ಸಾರಿಗೆ, ಸಾರ್ವಜನಿಕ ಸಾರಿಗೆ, ಶಾಲಾ – ಕಾಲೇಜು, ಸಿನೆಮಾ, ಪಾರ್ಕ್, ಧರ್ಮ ಸಭೆಗಳು ಹಾಗೂ ಇತರೆ ಸಭೆ ಸಮಾರಂಭಗಳು, ಪ್ರಾರ್ಥನಾ ಮಂದಿರಗಳು, ದೇವಸ್ಥಾನಗಳಲ್ಲಿ ಸೇರುವುದು, ಶಾಪಿಂಗ್ ಮಾಲ್, ಮನರಂಜನಾ ಸ್ಥಳಗಳು, ಕ್ಷೌರದ ಅಂಗಡಿಗಳು, ಜಿಮ್ ಹಾಗೂ ಬಾರ್.
ಅಹಮದಾಬಾದ್ ಸಂಪರ್ಕದ ಇನ್ನೂ 22 ಜನ : ಅಹಮದಾಬಾದ್‌ನಿಂದ ಬಂದಿರುವ ಇನ್ನೂ 22 ಜನರು ಜಿಲ್ಲೆಯಲ್ಲಿದ್ದಾರೆ. ಇವರನ್ನು ಜಿಲ್ಲೆಯ ಗಡಿಯಲ್ಲಿ ತಡೆಯಲಾಗಿದ್ದು, 17 ಜನರನ್ನು ಕೆರೆ ಬಿಳಚಿಯ ಮೊರಾರ್ಜಿ ವಸತಿ ನಿಲಯದಲ್ಲಿ ಇರಿಸಲಾಗಿದೆ. ನಾಲ್ವರನ್ನು ನಗರದಲ್ಲಿ ಇರಿಸಲಾಗಿದ್ದರೆ, ಇನ್ನೊಬ್ಬರನ್ನು ಶಿವಮೊಗ್ಗಕ್ಕೆ ಕಳಿಸಲಾಗಿದೆ.
ಆದರೆ, ಈ ಎಲ್ಲ ವಿನಾಯಿತಿಗಳು ನಗರದಲ್ಲಿ ಕಂಟೈನ್‌ಮೆಂಟ್ ವಲಯದಲ್ಲಿರುವ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಅವುಗಳನ್ನು ಹೊರತು ಪಡಿಸಿ ಉಳಿದ ಪ್ರದೇಶಗಳಲ್ಲಿ ಮಾತ್ರ ವಹಿವಾಟು ನಡೆಸಬಹುದಾಗಿದೆ ಎಂದವರು ತಿಳಿಸಿದ್ದಾರೆ.
ನಗರದಲ್ಲಿರುವ ಕೈಗಾರಿಕೆಗಳು, ರಫ್ತು ಆಧರಿತ ಉದ್ಯಮಗಳು, ಉತ್ಪಾದನಾ ಘಟಕಗಳು ಹಾಗೂ ಕೈಗಾರಿಕಾ ವಲಯಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದ ಎಲ್ಲ ಕೈಗಾರಿಕೆಗಳು ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಖಾಸಗಿ ಕಚೇರಿಗಳು ಶೇ.33ರಷ್ಟು ಸಿಬ್ಬಂದಿಯೊಂದಿಗೆ ಮಾತ್ರ ಕಾರ್ಯ ನಿರ್ವಹಿಸಬಹುದಾಗಿದೆ. ಆನ್‌ಲೈನ್ ಮಾರುಕಟ್ಟೆ ಸಂಸ್ಥೆಗಳಿಗೂ ಅನುಮತಿ ಇದೆ ಎಂದವರು ತಿಳಿಸಿದ್ದಾರೆ.
ಸಂಚಾರಕ್ಕೆ ಅನುಮತಿ : ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಜೊತೆಗೆ, ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ದ್ವಿಚಕ್ರ ವಾಹನಗಳಲ್ಲಿ ಒಬ್ಬರು ಮಾತ್ರ ಓಡಾಡಬಹುದು, ಹಿಂಬದಿ ಸವಾರರಿಗೆ ಅವಕಾಶ ಇಲ್ಲ. ಕಾರುಗಳಲ್ಲಿ ಇಬ್ಬರು ಮಾತ್ರ ಸಂಚರಿಸಬಹುದು. ಉಳಿದಂತೆ ಸಾರ್ವಜನಿಕ ವಾಹನಗಳಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಬೇಕೆಂದು ಹಲವು ವರ್ತಕರ ಸಂಘಗಳು, ಛೇಂಬರ್ ಆಫ್ ಕಾಮರ್ಸ್, ಲೆಕ್ಕ ಪರಿಶೋಧಕರ ಸಂಘದವರು, ಫೋಟೋ ಸ್ಟುಡಿಯೋ ಸಂಘದವರೂ ಸೇರಿದಂತೆ ಹಲವರು ತಮ್ಮ ಬಳಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಭೆ ನಡೆಸಿದ ನಂತರ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.